ಬೆಂಗಳೂರು: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಬ್ರಾಹ್ಮಣರೇ ಅಲ್ಲ ಅವರು ಪೇಶ್ವೆಗಳು ಎನ್ನುವ ಹೇಳಿಕೆ ನೀಡಿ ಅವರನ್ನು ಕೊಲೆಗಡುಕರಿಗೆ ಹೋಲಿಸಿ ಹೇಳಿಕೆ ನೀಡಿದ್ದು ಅಕ್ಷಮ್ಯವಾಗಿದ್ದು, ಇದೊಂದು ರೀತಿಯ ಅಪರಾಧದ ಕೆಲಸವಾಗಿದೆ ಇಡೀ ಸಮುದಾಯಕ್ಕೆ ನೋವಾಗಿದೆ ಹಾಗಾಗಿ ಕೂಡಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಹ್ಲಾದ್ ಜೋಷಿ ಹಾಗು ಬ್ರಾಹ್ಮಣ ಸಮುದಾಯಕ್ಕೆ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಶಾಸಕ ರವಿಸುಬ್ರಮಣ್ಯ ಆಗ್ರಹಿಸಿದ್ದಾರೆ.
'ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕ ರವಿಸುಬ್ರಮಣ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜಕೀಯವಾಗಿ ಹತಾಶರಾಗಿ ವಿನಾಕಾರಣಯಾಗಿ ಸರಳ, ಸಜ್ಜನ ರಾಜಕಾರಣಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಸರು ಎಳೆದು ತಂದು, ಜೋಶಿ ಬ್ರಾಹ್ಮಣರಲ್ಲ, ಬ್ರಾಹ್ಮಣ್ಯದಲ್ಲಿ ಎರಡು ಮೂರು ಪಂಗಡಗಳಿವೆ. ಅದರಲ್ಲಿ ಇವರು ಪೇಶ್ವೆಗಳು, ಕೊಲೆಗಡುಕರು ಎಂದು ಬಿಂಬಿಸಿರುವುದು ಖಂಡನಾರ್ಹ. ಇಂತಹ ಹೇಳಿಕೆ ನೀಡುವ ಮೂಲಕ ಪ್ರಹ್ಲಾದ್ ಜೋಶಿ ಅವರಿಗೆ ಮಾತ್ರವಲ್ಲ, ಇಡೀ ಬ್ರಾಹ್ಮಣ ಸಮುದಾಯವನ್ನು ತೇಜೋವಧೆ ಮಾಡಿದ್ದಾರೆ. ಇಡೀ ಸಮುದಾಯಕ್ಕೆ ಕುಮಾರಸ್ವಾಮಿ ಹೇಳಿಕೆಯಿಂದ ಬಹಳ ನೋವಾಗಿದೆ' ಎಂದಿದ್ದಾರೆ.
'ತಮ್ಮ ರಾಜಕೀಯ ಉದ್ದೇಶಕ್ಕಾಗಿ ಈ ರೀತಿ ಬಾಲಿಶ ಹೇಳಿಕೆ ನೀಡುವುದನ್ನು ಬಿಟ್ಟು ವಸ್ತುನಿಷ್ಠ ವಿಷಯ ಇರಿಸಿಕೊಂಡು ಅವರು ಜನರ ಬಳಿ ಹೋಗುವುದು ಹೆಚ್ಚು ಸೂಕ್ತ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ದೇಶಕ್ಕೆ ಮತ್ತು ಈ ಸಮಾಜಕ್ಕೆ ಬ್ರಾಹ್ಮಣರ ಕೊಡುಗೆ ಏನಿದೆ ಎಂದು ತಿಳಿದುಕೊಂಡು ಹೇಳಿಕೆ ಕೊಡುವುದು ಸೂಕ್ತ. ತಮ್ಮ ಮನೆ ಮಠ ಕಳೆದುಕೊಂಡು, ಪ್ಯಾಣತ್ಯಾಗ ಮಾಡಿದ ಅನೇಕ ಬ್ರಾಹ್ಮಣರು ಇತಿಹಾಸದಲ್ಲಿ ಬಂದು ಹೋಗಿದ್ದಾರೆ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಈ ರೀತಿ ಬಾಲಿಶ ಹೇಳಿಕೆ ಕೊಡುವ ಮೂಲಕ ತಮ್ಮ ಗೌರವವನ್ನು ಅವರು ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಪಕ್ಷಕ್ಕಲ್ಲದಿದ್ದರೂ ಕೂಡ ಕೆಲವರು ನಿಮ್ಮನ್ನು ಗೌರವಿಸುವ ವ್ಯಕ್ತಿಗಳಿದ್ದಾರೆ. ಅದು ಇದರಿಂದ ಹಾಳಾಗುತ್ತಿದೆ. ಇವತ್ತು ಮಾಡಿರುವ ಕೆಲಸಕ್ಕೆ ಇಡೀ ಸಮುದಾಯದ ಕ್ಷಮೆ ಕೋರಬೇಕು' ಎಂದು ಆಗ್ರಹಿಸಿದರು.