ಬೆಂಗಳೂರು: ಜನಸೇವೆಯಲ್ಲಿ ಸುಮಲತಾಗೆ ಝೀರೋ ಮಾರ್ಕ್ಸ್ ನೀಡಬೇಕು ಅಷ್ಟೇ ಎಂದು ಸಂಸದೆ ಸುಮಲತಾ ಅಂಬರೀಶ್‌ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್ ನೀಡಿದರು. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಸುಮಲತಾಗೆ ಯಾವುದೇ ರಾಜಕೀಯ ಪಕ್ಷಗಳು ಅಕ್ಕರೆ ತೋರುತ್ತಿಲ್ಲ. ಬಿಜೆಪಿ ಸೇರಲು ಅನೇಕ ಕಂಡಿಷನ್ ಹಾಕಿದ್ರು. ಅವರು ಒಲವು ತೋರುತ್ತಿಲ್ಲ. ಕಾಂಗ್ರೆಸ್ ನಾಯಕರ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ. ಈಗ ಚೆಲುವರಾಯಸ್ವಾಮಿ ಕೂಡ ವಿರೋಧ ಮಾಡ್ತಿದ್ದಾರೆ. ಜನಸ್ಪಂದನೆ ಕಳೆದುಕೊಂಡ ಮೇಲೆ ಯಾರೂ ಆಹ್ವಾನ ನೀಡುತ್ತಿಲ್ಲ. ಸುಮಲತಾ ದಿಶಾ ಮೀಟಿಂಗ್ ಮಾಡೋದಕ್ಕೆ ಫಸ್ಟ್ ಪ್ರೈಸ್ ಕೊಡಬೇಕು ಅಷ್ಟೇ. ಆದರೆ ಮತದಾರರ ಭೇಟಿ ಮಾಡಿಲ್ಲ, ಜನರನ್ನ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿಲ್ಲ. ಅವರಿಗೆ ಮಾರ್ಕ್ಸ್ ನೀಡಲು ಜನರ ಬಳಿ ಹೋಗೆ ಇಲ್ಲ ಎಂದು ಟೀಕಿಸಿದರು.
ಕುಟುಂಬ ರಾಜಕಾರಣ ಇಲ್ಲ:ಸಂದರ್ಶನವೊಂದರಲ್ಲಿ ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಅಮಿತ್ ಶಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಕರ್ನಾಟಕದಲ್ಲಿ ಜೆಡಿಎಸ್ ಹವಾ ಎಷ್ಟಿದೆ ಎಂಬುದು ಅಮಿತ್ ಶಾ ಅವರಿಗೂ ತಲುಪಿದೆ. ಕುಟುಂಬ ರಾಜಕಾರಣದಲ್ಲಿ ಯಾರೂ ಕೂಡ ಹಿಂಬಾಗಿಲ ರಾಜಕಾರಣ ಮಾಡಿಲ್ಲ. ಎಲ್ಲರೂ ಜನರಿಂದ ಆಯ್ಕೆಯಾಗಿ ಬಂದಿದ್ದಾರೆ ಎಂದು ತಿಳಿಸಿದರು. ಬಿಜೆಪಿಯಲ್ಲಿ ಅಪ್ಪ ಬದುಕಿರುವಾಗಲೇ ಮಕ್ಕಳು ರಾಜಕಾರಣ ಮಾಡ್ತಿದ್ದಾರೆ. ಯಡಿಯೂರಪ್ಪ, ಅವರ ಮಕ್ಕಳು ರಾಜಕಾರಣ ಮಾಡ್ತಿಲ್ವ? ಎಂದು ಪ್ರಶ್ನಿಸಿದರು. ಬಲವಂತವಾಗಿ ತೆಗೆದುಕೊಂಡ ಅಧಿಕಾರದಿಂದ ಜನರಿಗೆ ಕಿರುಕುಳ ಆಗ್ತಿದೆ ಎಂದು ಆರೋಪಿಸಿದರು.