ಬೆಂಗಳೂರು: ಮಹಿಳಾ ಸಾಧಕರನ್ನು ಸನ್ಮಾನಿಸುವುದಕ್ಕಾಗಿ ಅಕ್ಟೋಬರ್ 9 ರಂದು ರವೀಂದ್ರ ಕಲಾಕ್ಷೇತ್ರವನ್ನು ಮುಂಗಡವಾಗಿ ಕಾಯ್ದಿರಿಸಿದ ಬಳಿಕ ರದ್ದು ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಕಾರ್ಯಕ್ರಮಕ್ಕಾಗಿ 2022ರ ಜೂನ್ 7 ರಂದು ಮುಂಗಡ ಹಣ ನೀಡಿ ರವೀಂದ್ರ ಕಲಾಕ್ಷೇತ್ರ ಸಭಾಂಗಣ ಕಾಯ್ದಿರಿಸಲಾಗಿತ್ತು. ಆದರೆ, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಾಯ್ದಿರಿಸಿದ ದಿನಾಂಕವನ್ನು ಮುಂದೂಡುತ್ತಿರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಗಸ್ಟ್ 16 ರಂದು ಸೂಚನೆ ನೀಡಿದೆ.
ಆದರೆ, ಮಹಿಳಾ ಸಾಧಕರನ್ನು ಸನ್ಮಾನಿಸಲು ಕಳೆದ ಕೆಲವು ತಿಂಗಳುಗಳಿಂದ ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಹೊರ ಭಾಗಗಳಿಂದ ಹಲವು ಮಂದಿ ಸಾಧಕರು ಆಗಮಿಸುತ್ತಿದ್ದಾರೆ. ಇದರಿಂದ ಕಾರ್ಯಕ್ರಮ ಮುಂದೂಡಲು ಸಾಧ್ಯವಿಲ್ಲ. ನಿಗದಿಯಾದ ದಿನಾಂಕದಂದು ಸಮಾರಂಭ ನಡೆಸಲು ಅವಕಾಶ ನೀಡುವಂತೆ ಕೋರಿದರೂ ಪ್ರಯೋಜನವಾಗಿಲ್ಲ. ಆದ ಕಾರಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ ಮಾಹಿತಿ ನೀಡಿದರು. ಸರ್ಕಾರದ ಕ್ರಮ ಪ್ರಶ್ನಿಸಿ ಲೋಕಾಯುಕ್ತಕ್ಕೂ ದೂರು ನೀಡುವುದಾಗಿ ಹೇಳಿದರು.
ಇದನ್ನೂ ಓದಿ :ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಸೂಚನೆ