ಬೆಂಗಳೂರು: ಚಿಲುಮೆ ಸಂಸ್ಥೆಗೆ ಮತದಾರರ ಪರಿಷ್ಕರಣೆಗೆ ಅನುಮತಿ ನೀಡಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ಮತದಾರರ ಮಾಹಿತಿ ಸಂಗ್ರಹ ಮತ್ತು ಮತದಾರರ ಜಾಗೃತಿಯ ಕಾರ್ಯವನ್ನು ಚಿಲುಮೆ ಸಂಸ್ಥೆಗೆ 2018ರಲ್ಲಿ ಸಮ್ಮಿಶ್ರ ಸರ್ಕಾರ ಕೊಟ್ಟಿತ್ತು. ಟೆಂಡರ್ಅನ್ನು ಕರೆಯದೆ ಈ ಕೆಲಸವನ್ನು ನೀಡಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಕೆಲಸ ನೀಡಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಹಾಗಿದ್ದರೆ ರಾಜೀನಾಮೆ ಕೊಡಬೇಕಾದವರು ಯಾರು? ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಖಾಸಗಿ ಸಂಸ್ಥೆ ಬಿಎಲ್ಓ ಗುರುತಿನ ಚೀಟಿಯನ್ನು ಬಳಸಿಕೊಂಡಿದ್ದಾರೆ ಎಂದು ಗೊತ್ತಾದಾಗ ಆದೇಶ ಹಿಂಪಡೆಯಲಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರದ್ದು ಬಾಲಿಷ ವರ್ತನೆ. ಅಕ್ರಮ ಆದರೆ ದೂರು ನೀಡಲಿ, ಕ್ರಮ ಕೈಗೊಳ್ಳಲಾಗುವುದು. ಇದರಲ್ಲೇನೂ ಅವ್ಯವಹಾರ ಆಗಿಲ್ಲ. ಬಿಎಲ್‍ಒಗಳಿಗೆ ಐಡಿ ಕೊಟ್ಟ ವಿಚಾರ ಗೊತ್ತಾದೊಡನೆ ಚಿಲುಮೆ ಸಂಸ್ಥೆಗೆ ಕೊಟ್ಟಿದ್ದ ಆದೇಶವನ್ನು ಬಿಬಿಎಂಪಿ ಹಿಂದಕ್ಕೆ ಪಡೆದಿದೆ ಎಂದು ಸ್ಪಷ್ಟಪಡಿಸಿದರು. 2018ರಲ್ಲಿ ಆದೇಶ ನೀಡಿದಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಬಾಳೆಹಣ್ಣು ತಿನ್ನುತ್ತಿದ್ದರೇ ಎಂದೂ ಅವರು ಪ್ರಶ್ನಿಸಿದರು. ಅಕ್ರಮದ ತನಿಖೆ ಆಗಲಿ; ಉಪ್ಪು ತಿಂದವನು ನೀರು ಕುಡಿಯಲಿ ಎಂದರು.