ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸ್ವಾತಂತ್ರ್ಯ ಹೋರಾಟಗಾರರು ದೇಣಿಗೆ ಕೊಟ್ಟಿದ್ದಾರೆ. ಇದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮನೆ ಆಸ್ತಿಯಲ್ಲ. ಸಾವಿರಾರು ಕೋಟಿ ಆಸ್ತಿ ಇರುವ ಸಂಸ್ಥೆ ಇದು. ಇದರ ತನಿಖೆ ಮಾಡಬಾರದೇ ಎಂದು ಕಾಂಗ್ರೆಸ್ ನಾಯಕರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ, ನ್ಯಾಯಾಲಯ, ಪ್ರಜಾಪ್ರಭುತ್ವ, ಸಂಸತ್ತಿಗಿಂತ ದೊಡ್ಡವರು ಎಂದು ಕಾಂಗ್ರೆಸ್‍ನವರು ಭಾವಿಸಿದ್ದಾರೆ. ರಾಷ್ಟ್ರಪತಿ, ಸುಪ್ರೀಂಕೋರ್ಟ್, ಸಿಬಿಐ, ಐಟಿ, ಇಡಿ ಇವೆಲ್ಲವೂ ನಮ್ಮ ಸಂವಿಧಾನ ವ್ಯವಸ್ಥೆಯಡಿ ಬರುತ್ತವೆ. ಕಾಂಗ್ರೆಸ್ ನಾಯಕರು ಕಾನೂನಿಗಿಂತ ದೊಡ್ಡವರೇ ಎಂದು ಉತ್ತರ ಕೊಡಲಿ ಎಂದು ಒತ್ತಾಯಿಸಿದರು.
ಇಡಿ,ಐಟಿ, ಸಿಬಿಐ ಈ ಮೊದಲೂ ಇದ್ದವು:ಸದ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಕೇಂದ್ರದ ನಿರ್ದೇಶನದಂತೆ ಇಡಿ, ಐಟಿ, ಸಿಬಿಐ ಕಾರ್ಯ ನಿರ್ವಹಿಸುತ್ತಿವೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ. ಇವೆಲ್ಲವೂ ಬಿಜೆಪಿ ಸರ್ಕಾರ ಬಂದ ಬಳಿಕ ಸ್ಥಾಪಿತವಾದ ಸಂಸ್ಥೆಗಳಲ್ಲ. ಮೊದಲಿನಿಂದಲೂ ಈ ವ್ಯವಸ್ಥೆಗಳು ಜಾರಿಯಲ್ಲಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನರೇಂದ್ರ ಮೋದಿ ಅವರನ್ನು ಇಡಿ ತನಿಖೆಗೆ ಒಳಪಡಿಸಲಿಲ್ಲವೇ? ಅಮಿತ್ ಶಾ ವಿರುದ್ಧ ಸಿಬಿಐ ತನಿಖೆ ನಡೆದಿಲ್ಲವೇ? ಅಮಿತ್ ಶಾ ಅವರು ಜೈಲಿಗೆ ಹೋಗಿರಲಿಲ್ಲವೇ? ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರ ಕೊಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುವ ಅವಶ್ಯಕತೆ ಬಿಜೆಪಿಗೆ ಇಲ್ಲ. ನೀವು ಈವರೆಗೆ ಅನೇಕ ಸರ್ಕಾರಗಳನ್ನು ಕಿತ್ತು ಹಾಕಿದ್ದೀರಿ. ಪತ್ರಿಕೆಗಳನ್ನು ನಿರ್ಬಂಧಿಸಿದ್ದೀರಿ. ನ್ಯಾಯಾಲಯದ ತೀರ್ಪನ್ನೇ ತಿರಸ್ಕರಿಸಿದ್ದೀರಿ. ಹೀಗೆಲ್ಲ ಇದ್ದು ಪ್ರತಿಭಟನೆ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದರು. ನರೇಂದ್ರ ಮೋದಿ, ಅಮಿತ್ ಶಾ ಅವರ ವಿಚಾರಣೆ ವೇಳೆ ಬಿಜೆಪಿ ಹೋರಾಟ ಮಾಡಿತ್ತೇ? ನಮ್ಮ ನಾಯಕರು ಸಂವಿಧಾನಕ್ಕಿಂತ ದೊಡ್ಡವರೆಂದು ನಾವೆಂದೂ ಹೇಳಿಲ್ಲ. ನಾವು ಸಂವಿಧಾನ, ಕಾನೂನು ಕಟ್ಟಳೆಗೆ ಒಳಪಟ್ಟೇ ಆಡಳಿತ ಮಾಡುತ್ತಿದ್ದೇವೆ ಎಂದರು.