ಬೆಂಗಳೂರು:ಕುಮಾರಸ್ವಾಮಿ ಅವರು ರೇಟ್ ಕಾರ್ಡ್ ಲಿಸ್ಟ್ ಬಿಡುಗಡೆ ಮಾಡಿದ್ದಾರೆ. ಆ ಲಿಸ್ಟ್ನಲ್ಲಿರುವುದು ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ಆಗಿತ್ತೇನೋ, ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸಚಿವ ಚೆಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನೀವೇ ಹೇಳಬೇಕು ಟಾರ್ಗೆಟ್ ಚೆಲುವರಾಯಸ್ವಾಮಿಯೋ?, ಡಿಕೆಶಿ ಟಾರ್ಗೆಟ್ಟೋ ಗೊತ್ತಿಲ್ಲ. ಕುಮಾರಸ್ವಾಮಿ ಅವರಿಗೆ ಅಧಿಕಾರ ಕಳೆದುಕೊಂಡು ಇರಲು ಆಗಲ್ಲ. ಅವರು ಹಿಂದಿನ ಸರ್ಕಾರದ ಅವಧಿಯ ಪಟ್ಟಿ ತಂದು ಬಿಡುಗಡೆ ಮಾಡಿರಬೇಕು. ಅವರ ಟಾರ್ಗೆಟ್ ಈ ಸರ್ಕಾರವೋ ಅಥವಾ, ಚೆಲುವರಾಯಸ್ವಾಮಿಯೋ ಅವರೇ ಹೇಳಬೇಕು. ಅವರು ಮಾಜಿ ಸಿಎಂ ಇದ್ದಾರೆ. ಈ ಬಗ್ಗೆ ಅವರೇ ಮಾತಾಡಲಿ. ನಾವೇನಾದರೂ ಅವರ ಬಗ್ಗೆ ಮಾತಾಡಿದ್ರೆ, ಅವರ ಫ್ಯಾಮಿಲಿಯನ್ನು ಟಾರ್ಗೆಟ್ ಮಾಡುತ್ತಿದ್ದೇವೆ ಎಂದು ಹೇಳ್ತಾರೆ ಎಂದು ಟೀಕಿಸಿದರು.
ಎಲ್ಲೂ ಹೆಚ್ ಡಿ ದೇವೇಗೌಡ ಹಾಗೂ ಅವರ ಕುಟುಂಬದ ಬಗ್ಗೆ ನಾವು ಚರ್ಚೆ ಎತ್ತಿಲ್ಲ. ಇವರ ಬಗ್ಗೆ ಮಾತಾಡಿದ್ರೆ ಕುಟುಂಬದ ಬಗ್ಗೆ ಮಾತಾಡಿದ್ರು ಅಂತಾರೆ. ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಒಂದು ವ್ಯಕ್ತಿತ್ವ ಇದೆ. ಅವರು ಅದನ್ನು ಬಳಸಿದ್ರೆ ಸಾಕು. ತಾವೊಬ್ಬ ಈ ರಾಜ್ಯದ ಮಾಜಿ ಸಿಎಂ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅಥವಾ ಅದನ್ನು ಬಳಸಿಕೊಂಡು ಮಾತಾಡಿದ್ರೆ ಸಾಕು. ಅಸೆಂಬ್ಲಿಯಲ್ಲಿ ಕೂಡ ಅವರು ಮಾತಾಡಿದ್ದಾರೆ. ಅಸೆಂಬ್ಲಿಯಲ್ಲಿ ನನ್ನ ಬಗ್ಗೆಯೂ ಮಾತಾಡಿದ್ದಾರೆ. ಅವರು ಈ ರೀತಿ ಬಹಿರಂಗವಾಗಿ ಮಾತನಾಡುವ ಬದಲು ಬರೆದು ದೂರು ಕೊಡಲಿ. ಅನುಭವಸ್ಥರಿದ್ದಾರೆ ಅವರು, ಎಲ್ಲಾ ಅನುಭವ ನಮಗಿಂತ ಜಾಸ್ತಿ ಅವರಿಗೆ ಇದೆ. ಅವರು ಸಿಎಂ ಇದ್ದಾಗಲೇ 150 ಕೋಟಿ ರೂಪಾಯಿ ಹಗರಣ ನಡೆದಿತ್ತು ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರು ಅಂದು ಸೂಟ್‌ಕೇಸ್ ಕೂಡ ತೋರಿಸಿದ್ರು. ರಾಜೀನಾಮೆ ಕೂಡ ಕೊಟ್ಟಿರಲಿಲ್ಲ. ಅವರ ಕಾರ್ಡ್ ನಾವು ಮಾಡಿಲ್ಲ ಅಷ್ಟೇ. ಈಗ ಪಾರ್ಲಿಮೆಂಟ್ ಚುನಾವಣೆ ಇದೆ. ಪದೇ ಪದೆ ನನ್ನ ಮಂಡ್ಯ, ನನ್ನ ಮಂಡ್ಯ ಎಂದು ಹೇಳುತ್ತಿರುತ್ತಾರೆ. ಆದರೆ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಸ್ಥಾನಗಳನ್ನು ನಾವೇ ಗೆದ್ದಿದ್ದೇವೆ. ಅದು ಏಳು ಕೂಡ ನಾವೇ ಗೆದ್ದಂತೆ. ಈ ಗೆಲುವು ಈಗ ಅವರಿಗೆ ಕಷ್ಟ ಆಗಿರಬಹುದು. ಹೆಚ್ ಡಿ ಕುಮಾರಸ್ವಾಮಿ ನಮಗಿಂತ ಹೆಚ್ಚು ಅನುಭವಸ್ಥರಿದ್ದಾರೆ. ಅವರು ಮಾಡುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದಾದರೂ ತನಿಖೆಗೆ ಕೊಟ್ಟರೆ ಒಳ್ಳೆಯದು. ತನಿಖೆ ಮಾಡಿದ್ರೆ ಎಲ್ಲವೂ ಗೊತ್ತಾಗಲಿದೆ ಎಂದು ಚೆಲುವರಾಯಸ್ವಾಮಿ ಟಾಂಗ್ ನೀಡಿದರು.
ಇದನ್ನೂ ಓದಿ:ಡಿಕೆಶಿ ಬ್ಯುಸಿನೆಸ್ ಮಾಡಿಕೊಂಡು ಬಂದಿದ್ದಾರೆ, ಹೆಚ್ಡಿಕೆ ಏನು ಮಾಡಿಕೊಂಡು ಬಂದಿದ್ದಾರೆ ಹೇಳಲಿ: ಸಚಿವ ಚೆಲುವರಾಯಸ್ವಾಮಿ