ಇಂಧನ ಸಚಿವ ಕೆ.ಜೆ. ಜಾರ್ಜ್ ಸುದ್ದಿಗೋಷ್ಠಿ ಬೆಂಗಳೂರು: ಕಾಡುಗೋಡಿ ಓಫಾರ್ಮ್ ಸಮೀಪ ನವೆಂಬರ್ 19 ರಂದು ಬೆಳಗಿನ ಜಾವ ವಿದ್ಯುತ್ ಅವಘಡಕ್ಕೆ ತಾಯಿ, ಮಗು ಬಲಿಯಾದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ತನಿಖೆಗಾಗಿ ನಾಲ್ಕು ಕಮಿಟಿಗಳನ್ನು ಮಾಡಲಾಗಿದೆ. ತನಿಖಾ ತಂಡದ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.
ನಗರದ ಬೆಸ್ಕಾಂ ಪ್ರಧಾನ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಔದುಂಬರ ಹೋಮ್ಸ್ ಅಪಾರ್ಟ್ಮೆಂಟ್ನಲ್ಲಿ ಖಾಸಗಿ ಟ್ರಾನ್ಸ್‌ಫಾರ್ಮರ್ ಅನ್ನು ಹಾಕಿಕೊಳ್ಳಲಾಗಿದ್ದು, ಅದರೊಳಗೆ ಇಲಿ ಹೋಗಿ ಹಾಳು ಮಾಡಿದ್ದರಿಂದ ಟ್ರಿಪ್ ಆಗಿ ಈ ಅವಘಡ ಉಂಟಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇಂತಹ ವಿದ್ಯುತ್ ಅವಘಡ ಸಂಭವಿಸಬಾರದಿತ್ತು. ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಉಪ ನಿರ್ದೇಶಕರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ತನಿಖೆಗಾಗಿ 4 ಕಮಿಟಿಗಳನ್ನು ಮಾಡಿದ್ದೇವೆ. ಅಲ್ಲಿನ 5 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಪೊಲೀಸರು ಕೂಡ ಕ್ರಮ ತೆಗೆದುಕೊಂಡಿದ್ದಾರೆ. ಒಟ್ಟು ಮೂರು ಮಾದರಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಬೆಸ್ಕಾಂ ಆಂತರಿಕ ತನಿಖೆಯನ್ನು ಕೈಗೊಂಡಿದ್ದಾರೆ. ಚೀಫ್ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಅವರಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಹೇಳಿದರು.
ಕಾಡುಗೋಡಿ ಒಂದೇ ಅಲ್ಲ, ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯಾದ್ಯಂತ ಎಚ್ಚರ ವಹಿಸಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಎಲ್ಲಾ ಕ್ಷೇತ್ರ ಎಂಜಿನಿಯರ್‌ಗಳಿಗೆ ಕಾಲಕಾಲಕ್ಕೆ ತಪ್ಪದೆ ನಿಗದಿತ ನಿರ್ವಹಣೆಯನ್ನು ಕೈಗೊಳ್ಳುವಂತೆ ಸೂಚಿಸಿದ್ದು, 15 ದಿನಕ್ಕೊಮ್ಮೆ ನಿಯಮಿತವಾಗಿ ಸದರಿ ನಿರ್ವಹಣಾ ಕಾರ್ಯವನ್ನು ಪರಿಶೀಲಿಸಲಾಗುವುದು. ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಚೆಕ್ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಘಟನೆ ಬಗ್ಗೆ ಮಾಹಿತಿ ನೀಡಿದ ಇಂಧನ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಮೈತ್ರಿ ಲೇಔಟ್‌ನ ಔದುಂಬರ ಅಪಾರ್ಟ್ಮೆಂಟ್ನಲ್ಲಿ ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಬಾಕ್ಸ್‌ಗೆ ಇಲಿ ನುಗ್ಗಿ ಶಾರ್ಟ್ ಸರ್ಕ್ಯೂಟ್ ಆಗಿದೆ. 11 ಕೆವಿ ಓವರ್ ಹೆಡ್ ಎಚ್‌ಟಿ ಮಾರ್ಗದಲ್ಲಿ 3.50ಕ್ಕೆ ಕೇಬಲ್ ನೆಲಕ್ಕೆ ಬಿದ್ದಿವೆ. ಇದರಿಂದ ಕಾಡುಗೋಡಿ ಉಪಕೇಂದ್ರದ ಫೀಡರ್ ಟ್ರಿಪ್ ಆಗಿತ್ತು. ಫೀಡರ್ ಅನ್ನು ಪುನಃ ಟೆಸ್ಟ್ ಚಾರ್ಜ್ ಮಾಡಲಾಗಿದೆ. ಈ ವೇಳೆ ವಿದ್ಯುತ್ ಪ್ರವಹಿಸುವುದು ತಿಳಿದುಬಂದಿಲ್ಲ. ಮುಂಜಾನೆ 5.30ಕ್ಕೆ ತಾಯಿ-ಮಗು ತುಂಡಾದ ವಿದ್ಯುತ್ ತಂತಿ ತುಳಿದಾಗ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ ಎಂದು ತಿಳಿಸಿದರು.
ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್: ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಆಯೋಗ ತನ್ನ ವೆಬ್ಸೈಟ್ನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ತಾಯಿ ಮಗು ಸುಟ್ಟು ಕರಕಲಾಗಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಸಮಸ್ಯೆ ಎಂಬುದನ್ನು ಆಯೋಗ ಗಮನಿಸಿದೆ. ಇದು ಬೆಸ್ಕಾಂನ ನಿರ್ಲಕ್ಷ್ಯವನ್ನು ಸೂಚಿಸುತ್ತದೆ. ಆರು ವಾರಗಳಲ್ಲಿ ಈ ವಿಷಯದ ಬಗ್ಗೆ ಸಂಪೂರ್ಣವಾದ ವರದಿಯನ್ನು ನೀಡುವಂತೆ ಆಯೋಗ ಕರ್ನಾಟಕ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ಅವಘಡ ಘಟನೆ ಹಿನ್ನೆಲೆ: ಎ.ಕೆ ಗೋಪಾಲ್ ಕಾಲೊನಿ ನಿವಾಸಿಗಳಾದ ಸಂತೋಷ್ ಮತ್ತು ಸೌಂದರ್ಯ ದಂಪತಿ ತಮ್ಮ ಪುಟ್ಟ ಮಗಳು ಲಿಯಾಳೊಂದಿಗೆ ನವೆಂಬರ್ 19ರಂದು ತಮಿಳುನಾಡಿನಿಂದ ವೈಟ್‌ಫೀಲ್ಡ್‌ಗೆ ಬಸ್ನಲ್ಲಿ ಬಂದಿದ್ದರು. ಬೆಳಗಿನ ಜಾವ 5.30 ರ ಸುಮಾರಿಗೆ ಬಸ್ನಿಂದ ಇಳಿದು ಸಂತೋಷ್, ಸೌಂದರ್ಯ ಹಾಗೂ ಮಗು ವೈಟ್‌ಫೀಲ್ಡ್ ಸಮೀಪದ ಓಫಾರ್ಮ್ ಸರ್ಕಲ್ ಬಳಿ ಇರುವ ತಮ್ಮ ಮನೆ ಕಡೆಗೆ ಸಾಗಿದ್ದರು. ಈ ವೇಳೆ ರಸ್ತೆ ಬದಿ ತುಂಡಾಗಿ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣದೆ, ಕತ್ತಲಲ್ಲಿ ಮಗಳನ್ನು ಕಂಕುಳಲ್ಲಿ ಹೊತ್ತುಕೊಂಡು ಹೋಗುತ್ತಿದ್ದ ಸೌಂದರ್ಯ ತಂತಿಯ ಮೇಲೆ ಕಾಲಿಟ್ಟಿದ್ದರು. ಇದರಿಂದ ವಿದ್ಯುತ್ ಪ್ರವಹಿಸಿ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿದ್ದರು. ಪತ್ನಿ ಹಾಗೂ ಮಗಳನ್ನು ರಕ್ಷಿಸಲು ಸಂತೋಷ್ ಪ್ರಯತ್ನಿಸಿದ್ದರೂ, ಸಾಧ್ಯವಾಗಿರಲಿಲ್ಲ. ರಕ್ಷಣೆ ವೇಳೆ ವಿದ್ಯುತ್ ತಾಗಿ ಸಂತೋಷ್ ಕೈ ಕೂಡ ಸುಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರು: ತುಂಡಾಗಿ ಬಿದ್ದ ಕರೆಂಟ್ ತಂತಿ ತುಳಿದು ತಾಯಿ, ಮಗಳು ಸಾವು; ರಕ್ಷಿಸಲಾಗದೇ ಗೋಳಾಡಿದ ಪತಿ