ಬೆಂಗಳೂರು: ರಾಜಭವನದ ಗಾಜಿನ ಮನೆಯಲ್ಲಿ ನಡೆದ 2019ರ ರಾಷ್ಟ್ರಪತಿಯವರ ಪೊಲೀಸ್ ಪದಕ ಪ್ರದಾನ ಸಮಾರಂಭದಲ್ಲಿ ಉತ್ತಮ ಸಾಧನೆಗೈದ ಪೊಲೀಸರಿಗೆ ಪದಕ ಪ್ರದಾನ ಮಾಡಲಾಯ್ತು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ .ಎಸ್ ಯಡಿಯೂರಪ್ಪ, ಬಿಜೆಪಿ ಮುಖಂಡರಾದ ಆರ್ ಅಶೋಕ್ , ಅಶ್ವತ್ ನಾರಾಯಣ್, ಡಿಜಿಪಿ ನೀಲಮಣಿ ಎನ್ ರಾಜು, ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಕಮಲ್ ಪಂಥ್, ಪ್ರವೀಣ್ ಸೂದ್ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ರು.
ಕಾರ್ಯಕ್ರಮದಲ್ಲಿ ಒಟ್ಟು 65 ಮಂದಿ ಪೊಲೀಸರಿಗೆ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪದಕ ಪ್ರದಾನ ಮಾಡಿದ್ರು. ಎಡಿಜಿಪಿ ಸಲೀಂ, ಮಾಲಿನಿ ಕೃಷ್ಣಮೂರ್ತಿ, ಎಎಸ್ಪಿ ಬಲರಾಮೇಗೌಡ, ಡಿವೈಎಸ್ಪಿ ಮರಿಯಪ್ಪ, ವಾಲೈಂಟಿನ್ ಡಿಸೋಜಾ, ಇನ್ಸ್ಪೆಕ್ಟರ್ ಸಿದ್ದಲಿಂಗಯ್ಯ ಸೇರಿ ಇನ್ನಿತರರಿಗೆ ಪದಕ ಪ್ರದಾನ ಮಾಡಲಾಯ್ತು.
ಸಾಧನೆಗೈದ ಪೊಲೀಸರಿಗೆ ರಾಷ್ಟ್ರಪತಿ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ರಾಷ್ಟ್ರಪತಿ ಪದಕ್ಕೆ ಭಾಜನಾರಾಗಿರುವ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಅಭಿನಂದನೆಗಳು. ರಾಜ್ಯದ ಕಾನೂನು ಸುವ್ಯವಸ್ಥೆ ಮೂಲಕ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಜಾಗೃತೆಯಿಂದ ಕೆಲಸ ಮಾಡ್ತಾರೆ. ಹೀಗಾಗಿ ಪ್ರತಿವರ್ಷ ಸಾಧನೆ ಮಾಡಿದವರಿಗೆ ರಾಷ್ಟ್ರಪತಿ ಸೇವಾ ಪದಕ ಪ್ರದಾನ ಮಾಡಲಾಗುತ್ತೆ ಎಂದ್ರು. ಸಮಾಜದ ದುಷ್ಟ ಶಕ್ತಿಗಳನ್ನ ಮಟ್ಟ ಹಾಕಲು ಸದಾ ಮುಂದಾಗಿರಬೇಕು, ನಿಷ್ಠೆಯಿಂದ ಪ್ರಾಮಾಣಿಕ ಕೆಲಸ ಮಾಡುವರಿಗೆ ನಮ್ಮ ಸರ್ಕಾರ ಸಹಾಯ ಮಾಡುತ್ತೆ ಎಂದು ಇದೇ ವೇಳೆ ಸಿಎಂ ಅಭಯ ನೀಡಿದ್ರು.