ಬೆಂಗಳೂರು:ನಾವು ಅಣಬೆಗಳ ರೀತಿ ಬೆಳೆದು ಬಂದಿಲ್ಲ, ವಂಶ ರಾಜಕಾರಣದ ಕುಡಿಯಾಗಿಯೂ ಬೆಳೆದು ಬಂದಿಲ್ಲ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ಸೇರಿ ಪಕ್ಷ ಕಟ್ಟಿ ತಳಮಟ್ಟದಿಂದ ಬೆಳೆದು ಬಂದವರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೋದಿ ನಮ್ಮ ರಾಷ್ಟ್ರೀಯ ನಾಯಕ. ಅವರ ಹೆಸರು ಹೇಳಿರುವುದು ನಿಜ. ಹಿಂದೆ ಅಡ್ವಾಣಿ, ವಾಜಪೇಯಿ, ದೀನದಯಾಳ್ ಹೆಸರೇಳಿದ್ದೇವೆ. ನಮಗೆ ಹಲವಾರು ನಾಯಕರಿದ್ದಾರೆ. ಆದರೆ ಕುಟುಂಬದ ನಾಯಕರಿಲ್ಲ. ನಮಗೆ ಸಾರ್ವಜನಿಕ ನಾಯಕರು, ಪಕ್ಷದ ನಾಯಕರು ಇದ್ದಾರೆ. ಪಕ್ಷದಲ್ಲಿ ಯಾರೇ ನಾಯಕರಾದರೂ ಅವರ ಹೆಸರನ್ನು ಹೇಳುತ್ತೇವೆ. ಆದರೆ, ಜೆಡಿಎಸ್ನಲ್ಲಿ ಕುಟುಂಬ ರಾಜಕಾರಣ ಮಾತ್ರ ಇದೆ. ಆದರೆ, ನಾವು ಕುಟುಂಬದಿಂದ ಬಂದಿಲ್ಲ. ನಾವು ನೆಲಮಟ್ಟದಿಂದ ಬಂದಿದ್ದೇವೆ. ತುರ್ತುಸ್ಥಿತಿಯಲ್ಲಿ ನಮ್ಮ ಇಡೀ ಕುಟುಂಬ ಜೈಲುಪಾಲಾಗಿತ್ತು. ಅಯೋಧ್ಯ ವಿಚಾರದಲ್ಲೂ ಜೈಲಿಗೆ ಹೋಗಿದ್ದೇವೆ. ನಾವು ಅಣಬೆಗಳ ರೀತಿ ಬೆಳೆದು ಬಂದಿಲ್ಲ. ನಾವು ಹೋರಾಟದ ಮುಖಾಂತರ ಜೈಲು ಶಿಕ್ಷೆ ಅನುಭವಿಸಿ ಪಕ್ಷ ಕಟ್ಟಿ ಬೆಳೆದು ಬಂದಿದ್ದೇವೆ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಚುನಾವಣಾ ಕಣದಿಂದ ನಿವೃತ್ತಿಯಾಗಬೇಕು. ಕೇಂದ್ರ,ರಾಜ್ಯದ ನಾಯಕತ್ವಕ್ಕೆ ಬೆಲೆ ಕೊಟ್ಟು ನಿವೃತ್ತಿಯಾಗುವುದು ಒಳ್ಳೆಯದು. ಇನ್ನು ಸಮಯವಿದೆ ಅವರು ಯೋಚಿಸಬೇಕು. ಬಚ್ಚೇಗೌಡರ ಜೊತೆ ಸಿಎಂ ಮಾತನಾಡಿದ್ದಾರೆ. ಪ್ರಚಾರಕ್ಕೆ ಬರುವಂತೆ ಹೇಳಿದ್ದಾರೆ. ಕೇಂದ್ರ, ರಾಜ್ಯದ ನಾಯಕತ್ವಕ್ಕೆ ಗೌರವ ಕೊಟ್ಟು ಪಕ್ಷ ನಿಷ್ಟೆ ಮೆರೆಯಿರಿ ಎಂದು ಮನವಿ ಮಾಡುತ್ತಿದ್ದೇವೆ. ಅವರು ಪಕ್ಷದ ಶಿಸ್ತಿನ ಸಿಪಾಯಿ ಪ್ರಚಾರಕ್ಕೆ ಬರುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.