ಬೆಂಗಳೂರು: ಆರ್ಎಸ್ಎಸ್ನವರಿಗೆ ಊಟ ಹಾಕ್ತೀವಿ ಅಂತಿರಲ್ಲ. ನೀನೇನು ಟಾಟಾನಾ, ಬಿರ್ಲಾನಾ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಜಿ ಸಚಿವ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧ ಮುಂಬಾಗ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರದವರಿಗೆ ನೀವೇನು ಊಟ ಹಾಕಿಸೋ ಅಗತ್ಯತೆ ಇಲ್ಲ. ಆ ನೈತಿಕತೆಯೂ ನಿಮಗಿಲ್ಲ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ಅಹಂಕಾರದ ಪರಮಾವಧಿ. ಅವರು ಊಟ ಹಾಕುವುದಾದರೆ, ಈಗ ಹಲವು ಕಾಂಗ್ರೆಸ್ ನಾಯಕರು ನಿರ್ಗತಿಕರಾಗಿದ್ದಾರೆ. ಫುಟ್ಪಾತ್ನಲ್ಲಿರುವ ಕಾಂಗ್ರೆಸ್ ನವರಿಗೆ ಊಟ ಹಾಕಿಸಲಿ ಎಂದು ವಾಗ್ದಾಳಿ ನಡೆಸಿದರು.
ರಾಮನಗರ ಭಾಗದಲ್ಲಿ ಹಿಂದೂ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಡಿ.ಕೆ. ಶಿವಕುಮಾರ್ ಹೆದರಿದ್ದಾರೆ. ಅವರಿಗೆ ಈಗ ಉಳಿದುಕೊಂಡಿರುವುದು ಕನಕಪುರ ಕ್ಷೇತ್ರ ಒಂದೇ. ಮೊದಲು ಅವರು ಆ ಕ್ಷೇತ್ರವನ್ನು ಉಳಿಸಿಕೊಳ್ಳಲಿ ಎಂದು ಅಶೋಕ್ ಟಾಂಗ್ ನೀಡಿದರು.
ಕಪಾಲಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಮತಾಂತರ ಚಟುವಟಿಕೆಗಳು ತೀವ್ರಗೊಂಡಿರೋದು ನಿಜ. ಒಂದೇ ಕೋಮಿಗೆ ಭೂಮಿ ಹಂಚಲಾಗುತ್ತಿದೆ. ಅಲ್ಲದೆ ಸರ್ಕಾರಿ ಭೂಮಿ ಲಪಟಾಯಿಸುವ ಹುನ್ನಾರವೂ ನಡೆದಿದೆ. ನಾವೆಲ್ಲ ಮುನೇಶ್ವರನ ಆರಾಧಕರು. ಡಿ.ಕೆ. ಶಿವಕುಮಾರ್ ಕೂಡ ಮುನೇಶ್ವರನ ಭಕ್ತರೇ. ಹಾಗಾಗಿ ಮುನೇಶ್ವರಬೆಟ್ಟವನ್ನು ಉಳಿಸಿಕೊಳ್ಳುತ್ತೇವೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು.
ನಾನು ಕಂದಾಯ ಖಾತೆಯನ್ನು ಉಳಿಸಿಕೊಂಡು ಹೆಚ್ಚುವರಿಯಾಗಿರುವ ಪೌರಾಡಳಿತ ಖಾತೆಯನ್ನು ಬಿಟ್ಟುಕೊಟ್ಟಿದ್ದೇನೆ ಎಂದು ಇದೇ ವೇಳೆ ಅಶೋಕ್ ತಿಳಿಸಿದರು.