ಬೆಂಗಳೂರು:ರಾಜ್ಯದಲ್ಲಿ ಸುರಿದ ಮಳೆಯಿಂದ ಹಾನಿ ಮತ್ತು ಪ್ರವಾಹ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಸದ್ಯದಲ್ಲೇ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ತಂಡ ಬರಬೇಕಿತ್ತು. ಆದರೆ, ಈ ತಂಡ ರಾಜ್ಯಕ್ಕೆ ಭೇಟಿ ನೀಡುವುದು ಮುಂದಕ್ಕೆ ಹೋಗಿದೆ. ಈ ತಂಡ ರಾಜ್ಯಕ್ಕೆ ಯಾವಾಗ ಭೇಟಿ ನೀಡಲಿದೆ ಎಂಬುದು ಇನ್ನೂ ದಿನಾಂಕ ನಿಗದಿಯಾಗಿಲ್ಲ.
ರಾಜ್ಯದಲ್ಲಿ ಕಳೆದ ತಿಂಗಳು ಭಾರಿ ಮಳೆಯಾಗಿ ನೆರೆ ಪರಿಸ್ಥಿತಿ ಉಂಟಾಗಿ ಮಡಿಕೇರಿ, ಬೆಳಗಾವಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ ಸೇರಿದಂತೆ ಮತ್ತಿತರ ಕಡೆ ಹಾನಿಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಮನೆಗಳು ಕುಸಿದು, ಬೆಳೆ ನಷ್ಟವಾಗಿದ್ದು, ಬೆಳೆ ನಷ್ಟ ಹಾಗೂ ಸೇತುವೆಗಳು ಕುಸಿದು ಸಾವಿರಾರು ಕೋಟಿ ರೂ. ನಷ್ಟವಾಗಿತ್ತು.
ರಾಜ್ಯ ಸರ್ಕಾರ ಪರಿಹಾರಕ್ಕಾಗಿ ಮನವಿ ಮಾಡಿ, ಅಧ್ಯಯನ ತಂಡವನ್ನು ಕಳುಹಿಸುಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿತ್ತು. ಅದರಂತೆ ಕೇಂದ್ರ ಅಧ್ಯಯನ ತಂಡ ಸೋಮವಾರ ಅಥವಾ ಮಂಗಳವಾರ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದ್ದು, ಕೇಂದ್ರದ ಅಧ್ಯಯನ ತಂಡದ ಭೇಟಿ ಮುಂದಕ್ಕೆ ಹೋಗಿದೆ. ಹೀಗಾಗಿ ಕೇಂದ್ರದಿಂದ ಬರಬೇಕಾದ ನೆರವು ತಕ್ಷಣಕ್ಕೆ ರಾಜ್ಯ ಸರ್ಕಾರಕ್ಕೆ ಸಿಗುವುದು ಅನುಮಾನವಾಗಿದೆ. ಶೀಘ್ರವೇ ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ ನಲ್ಲಿ ಮಧ್ಯಭಾಗದಲ್ಲಿ ಸುರಿದ ಮಳೆಯಿಂದ ಸುಮಾರು 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ, ಭತ್ತ, ಕಾಫಿ,ಟೀ, ಮೆಣಸು, ಮೆಕ್ಕೆಜೋಳ ಸೇರಿದಂತೆ ಭಾರೀ ಪ್ರಮಾಣದ ಬೆಳೆನಷ್ಟ ಉಂಟಾಗಿತ್ತು. ಅನೇಕ ಕಡೆ ಜೀವಹಾನಿ, ಮನೆಗಳ ಕುಸಿತ ಜೊತೆಗೆ ಜಾನುವಾರುಗಳು ಕೊಚ್ಚಿ ಹೋಗಿ ಸಾವಿರಾರು ಕೋಟಿ ನಷ್ಟ ಉಂಟಾಗಿತ್ತು.
ಕಳೆದ ವಾರ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೂಡಲೇ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ರಾಜ್ಯಕ್ಕೆ ತಕ್ಷಣವೇ ಪರಿಹಾರ ಕೈಗೊಳ್ಳಲು ಮುಂಗಡವಾಗಿ ಕೇಂದ್ರ ಸರ್ಕಾರ 400 ಕೋಟಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಾಹಣಾ ನಿಧಿಯಡಿ ರಾಜ್ಯಕ್ಕೆ 395 ಕೋಟಿ ಪರಿಹಾರ ಬಿಡುಗಡೆ ಮಾಡಿತ್ತು.