ಬೆಂಗಳೂರು: ಇನ್ಸ್ಟಾಗ್ರಾಂ ನಲ್ಲಿ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡು ಸ್ನೇಹದ ಸೋಗಿನಲ್ಲಿ ಎರಡು ಬಾರಿ ಅತ್ಯಾಚಾರ ಎಸಗಿದ ಆರೋಪದಡಿ ಐವರು ಕಾಮುಕರನ್ನು ಹನುಮಂತ ನಗರ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ. ನಗರ ನಿವಾಸಿಗಳಾದ ವೆಂಕಟೇಶ್, ಚೇತನ್, ಲೇಖನ್, ರಕ್ಷಕ್, ಅಭಿಷೇಕ್ ಬಂಧಿತ ಆರೋಪಿಗಳು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ವೆಂಕಟೇಶ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದು, ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದ ಈತ ಇನ್ಸ್ಟಾಗ್ರಾಂ ಖಾತೆ ತೆರೆದು ಬಾಲಕಿಯನ್ನು ಪರಿಚಯಿಸಿಕೊಂಡಿದ್ದಾನೆ. ಸಲುಗೆ ಹೆಚ್ಚಾದಂತೆ ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ತನ್ನ ಜೊತೆ ಬಾಲಕಿಯು ಚಾಟ್ ಮಾಡುತ್ತಿರುವುದನ್ನು ಸಹಚರರೊಂದಿಗೆ ವೆಂಕಟೇಶ್ ಹಂಚಿಕೊಂಡಿದ್ದ.
ಕಳೆದ ನವೆಂಬರ್ 8ರಂದು ಮುಂಜಾನೆ ಬಾಲಕಿಯನ್ನು ಪುಸಲಾಯಿಸಿ ಹೊರಗೆ ಹೋಗೋಣ ಎಂದು ಹೇಳಿ ವೆಂಕಟೇಶ್, ಬಾಬು ಹಾಗೂ ಅಭಿಷೇಕ್ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಪಾರ್ಕ್ವೊಂದರ ಬಳಿ ಮೂವರು ಆರೋಪಿಗಳು ಬಾಲಕಿ ಮೇಲೆ ಅತ್ಯಾಚಾರ ಮಾಡಿ ಮನೆಗೆ ಡ್ರಾಪ್ ಮಾಡಿದ್ದರು. ಮರ್ಯಾದೆಗೆ ಹೆದರಿ ಬಾಲಕಿ ಮೇಲೆ ನಡೆದ ಹೇಯಕೃತ್ಯವನ್ನು ಪೋಷಕರು ಪೊಲೀಸರಿಂದ ಮುಚ್ಚಿಟ್ಟಿದ್ದರು.
ಇನ್ನೊಂದೆಡೆ ಆನ್ಲೈನ್ ಕ್ಲಾಸ್ ನೆಪದಲ್ಲಿ ಆರೋಪಿಗಳೊಂದಿಗೆ ಬಾಲಕಿ ಚಾಟ್ ಮಾಡುತ್ತಿದ್ದಳು ಎನ್ನಲಾಗಿದೆ. ಮತ್ತೆ ವೆಂಕಟೇಶ್ ಹಾಗೂ ಲೇಖನ್ ಕರೆ ಮಾಡಿ ಬೆದರಿಸಿ ಜ.18ರಂದು ಮಧ್ಯರಾತ್ರಿ ಗುಟ್ಟಹಳ್ಳಿಯ ಸ್ನೇಹಿತನ ಮನೆಗೆ ಕರೆತಂದು ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಈ ನಡುವೆ ಮನೆಯಲ್ಲಿ ಮೊಮ್ಮಗಳು ಇಲ್ಲದಿರುವುದನ್ನು ಕಂಡ ಬಾಲಕಿಯ ತಾತ ಶೋಧ ನಡೆಸಲು ಮುಂದಾಗಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರಿಗೆ ಮೊಮ್ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಬಾಬು ಎಂಬಾತ ತಲೆಮರೆಸಿಕೊಂಡಿದ್ದು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.