ಬೆಂಗಳೂರು :ಪತ್ನಿಯನ್ನು ಆರೈಕೆ ಮಾಡುತ್ತಿದ್ದ ಯುವತಿ ಮೇಲೆ ಆತ್ಯಾಚಾರವೆಸಗಿರುವುದಾಗಿ ಆರೋಪಿಸಿ ನಿವೃತ್ತ ಐಎಎಸ್ ಅಧಿಕಾರಿ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರೆಸೆ ದೂರು ನೀಡಿದ್ದಾಳೆ. ಮತ್ತೊಂದೆಡೆ ಬ್ಲ್ಯಾಕ್ ಮೇಲ್ ಮಾಡಿ ತಮ್ಮ ಮೇಲೆ ಆತ್ಯಾಚಾರವೆಸಗಿರುವುದಾಗಿ ಸುಳ್ಳು ಆರೋಪ ಹೊರಿಸಿ 70 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಪ್ರತಿದೂರು ನೀಡಿದ್ದಾರೆ. ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಿವೃತ್ತ ಅಧಿಕಾರಿ ಕರೆ ಮಾಡಿ ತಮ್ಮ ಪತ್ನಿಗೆ ಮರೆವು ಕಾಯಿಲೆಯಿದ್ದು, ಕೇರ್ ಟೇಕರ್ ಬೇಕಾಗಿದೆ ಎಂದು ಹೇಳಿ ತನ್ನನ್ನ ನಿಯೋಜಿಸಿದ್ದರು. ಇದರಂತೆ ಆವರ ಮನೆಯಲ್ಲಿ ಪತ್ನಿಗೆ ಆರೈಕೆ ಮಾಡುತ್ತಿದ್ದೆ. ಈ ವೇಳೆ ರಾತ್ರಿ ವೇಳೆ ನಾನು ಮಲಗಿರುವ ಕೊಠಡಿಗೆ ಬಂದು ಅವರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಕೆಲ ದಿನಗಳ ಬಳಿಕ ಕುಡಿಯಲು ವಿದೇಶಿ ವೈನ್ ತಂದಿದ್ದರು. ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬಿಸಿ ಮದ್ಯದಲ್ಲಿ ಪ್ರಜ್ಞೆ ತಪ್ಪಿಸುವ ಮಾತ್ರೆ ಬೆರೆಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಕತ್ತು ಹಿಸುಕಿ ಸಾಯಿಸಲು ಪ್ರಯತ್ನಿಸಿದ್ದಾರೆ. ಯಾರಿಗಾದರೂ ಹೇಳಿದರೆ ಸೆರೆಹಿಡಿದಿರುವ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.