ಬೆಂಗಳೂರು: ಕಿರುಕುಳದಿಂದಾಗಿ ದೂರ ಸರಿದಿದ್ದ ಪ್ರೀತಿಸಿದ್ದ ಯುವತಿಯೊಂದಿಗೆ ಸೆರೆ ಹಿಡಿದಿದ್ದ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿ ಮಾಜಿ ಪ್ರಿಯಕರ ಹಾಗೂ ಆತನ ಇಬ್ಬರು ಸ್ನೇಹಿತರು ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಡ್ಯಾನ್ಸ್ ಮಾಸ್ಟರ್ ಸೇರಿ ಮೂವರನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದೂರಿನಲ್ಲಿ ಯುವತಿ ಹೇಳಿದ್ದೇನು?:ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಆ್ಯಂಡಿ ಜಾರ್ಜ್, ಸಂತೋಷ್ ಹಾಗೂ ಶಶಿ ಎಂಬುವರನ್ನು ಬಂಧಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಸಂತ್ರಸ್ತೆಗೆ ಸೋಷಿಯಲ್ ಮೀಡಿಯಾ ಮುಖಾಂತರ ಪ್ರಮುಖ ಆರೋಪಿ ಆ್ಯಂಡಿ ಜಾರ್ಜ್ ಪರಿಚಯವಾಗಿ ನಂತರ ಪ್ರೇಮಕ್ಕೆ ತಿರುಗಿತ್ತು. ಆರೋಪಿಯು ಖಾಸಗಿ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕನಾಗಿ ಕೆಲಸ ಮಾಡಿಕೊಂಡಿದ್ದರು. ಇಬ್ಬರು ಸಹ ಎರಡು ವರ್ಷಗಳ ಕಾಲ ಜೊತೆಯಲ್ಲಿ ಓಡಾಡಿಕೊಂಡಿದ್ದರು. ಈ ಮಧ್ಯೆ ಆಕೆ ಜೊತೆ ತೆಗೆಸಿಕೊಂಡಿದ್ದ ಫೋಟೊ ಹಾಗೂ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿದ್ದು. ಕಿರುಕುಳಕ್ಕೆ ಬೇಸತ್ತು ಕಳೆದ ಎರಡು ವರ್ಷಗಳ ಹಿಂದೆ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಹಳೆಯ ಫೋಟೊ - ವಿಡಿಯೋ ತೋರಿಸಿ ಬೆದರಿಕೆ ಹಾಕಿ ತನ್ನ ಮೇಲೆ ಆತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಹಳೆಯ ವಿಡಿಯೋಗಳನ್ನು ಆ್ಯಂಡಿ, ಸ್ನೇಹಿತರಿಗೆ ಕಳುಹಿಸಿದ್ದ. ಅವರು ಸಹ ತಮ್ಮ ಮೇಲೆ ಒತ್ತಡ ಹಾಕಿ ಇಬ್ಬರು ಅನ್ಯ ಸಂದರ್ಭಗಳಲ್ಲಿ ರೇಪ್ ಮಾಡಿದ್ದಾರೆ. ಕೆಲ ದಿನಗಳ ನಂತರ ಆ್ಯಂಡಿ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿ ವೈರಲ್ ಮಾಡಲು ಕಾರಣನಾಗಿದ್ದಾನೆ. ಅತ್ಯಾಚಾರ ಎಸಗುವುದಲ್ಲದೆ, ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.