ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಮಹಿಳಾ ವಿಭಾಗದ ಟಾಪರ್ ಆಗಿ ಬಂಧಿತರಾಗಿರುವ ರಚನಾ, ಸದ್ಯ ಸಿಐಡಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ರಚನಾ ಸದ್ಯ ಸಿಐಡಿ ಕಸ್ಟಡಿಯಲ್ಲಿದ್ದು, ವಿಚಾರಣೆ ವೇಳೆ ತಮ್ಮ ಕಣ್ಣೀರಿನ ಕಥೆ ಹೇಳಿಕೊಂಡಿದ್ದಾರೆ ಎನ್ನಲಾಗ್ತಿದೆ.
'ನನ್ನ ತಾಯಿ ಓರ್ವ ಟೀಚರ್. ಹೆಣ್ಣುಮಗು ಹುಟ್ಟಿತು ಎಂಬ ಕಾರಣಕ್ಕೆ ನನ್ನ ತಂದೆ ನಮ್ಮನ್ನು ಬಿಟ್ಟು ಹೋದರು. ನಂತರ ನನ್ನನ್ನು ನಮ್ಮ ತಾಯಿ ಗಂಡು ಮಗನ ರೀತಿ ಬೆಳೆಸಿದರು. ನಾನು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಸಹ ಪಡೆದಿರುವೆ. ಎನ್ಟಿಪಿಎಸ್ ಥರ್ಮಲ್ ಪ್ಲಾಂಟ್ನಲ್ಲಿ ಕೆಲಸ ಸಹ ಮಾಡುತ್ತಿದ್ದೆ. ಕೆಲಸ ಮಾಡುವಾಗಲೇ ಎರಡು ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದೆ. ಈ ವೇಳೆ ಗುರುಬಸವರಾಜ್ ಎಂಬಾತನ ಪರಿಚಯವಾಗಿತ್ತು. ಆತನ ಜೊತೆಗೆ ನಾನು ಪಿಎಸ್ಐ ಪರೀಕ್ಷೆ ಬರೆದಿದ್ದರ ಬಗ್ಗೆ ಹೇಳಿಕೊಂಡಿದ್ದೆ. ಆಗ ಆತ ಎಷ್ಟು ಬರೆದರೂ ಆಗಲ್ಲ.. ತಾನು ಕೆಲಸ ಮಾಡಿಸಿಕೊಡುವುದಾಗಿ ಹೇಳಿದ್ದ. ಅಲ್ಲದೆ ಇದಕ್ಕಾಗಿ 35 ಲಕ್ಷ ರೂಪಾಯಿ ಕೊಡಬೇಕು ಎಂದಿದ್ದ'.