ಬೆಂಗಳೂರು: ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಭರ್ಜರಿ ಮುನ್ನಡೆ ಸಾಧಿಸಿ ಬಹುಮತ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದ್ದಾರೆ. ಇಂದು ಸಂಜೆ 4 ಗಂಟೆ ಹೊತ್ತಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚಿಸಿದ್ದಾರೆ. ಕರ್ನಾಟಕದ ಅಮೋಘ ಗೆಲುವಿಗೆ ಪರಸ್ಪರ ಇಬ್ಬರೂ ನಾಯಕರು ಅಭಿನಂದಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ದೊಡ್ಡ ಮೊತ್ತದ ಬಹುಮತವನ್ನು ಕಾಂಗ್ರೆಸ್ ಗಳಿಸಿದೆ. 2013ರ ಬಳಿಕ ಮತ್ತೊಮ್ಮೆ ಪೂರ್ಣ ಪ್ರಮಾಣದ ಸರ್ಕಾರ ರಚಿಸುವಷ್ಟು ಬಹುಮತ ಜನ ನೀಡಿದ್ದಾರೆ. ಇದರಿಂದ ಜನ ಬಯಸುವ ಉತ್ತಮ ಆಡಳಿತವನ್ನು ನಾವು ನೀಡಬೇಕಾಗಿದೆ. ರಾಜ್ಯ ನಾಯಕರಿಗೆ ಯಾವ ರೀತಿಯ ಸೂಚನೆಯನ್ನು ನೀಡಬೇಕು ಎಂಬ ಕುರಿತು ಸಹ ನಾಯಕರು ಚರ್ಚಿಸಿದ್ದಾರೆ.
ನಾಳೆ ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದೆ. ಇಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳ ಜೊತೆ ಚರ್ಚಿಸಿ ಯಾರನ್ನು ಒಮ್ಮತದ ಮೂಲಕ ಆಯ್ಕೆ ಮಾಡಬೇಕು ಎಂಬ ಕುರಿತು ತೀರ್ಮಾನಕ್ಕೆ ಬರಲಿದ್ದಾರೆ. ರಾಜ್ಯದಲ್ಲಿ ಅತ್ಯಂತ ಸಂಘಟಿತವಾಗಿ ಹೋರಾಟ ನಡೆಸಿ ಯಾವುದೇ ಒಗ್ಗಟ್ಟು ಮುರಿಯದಂತೆ ಪಕ್ಷವನ್ನು ಅಧಿಕಾರಕ್ಕೆ ತರಲು ಮಾತುಕತೆ ನಡೆಸಲು ಮಲ್ಲಿಕಾರ್ಜುನ ಖರ್ಗೆ ಹಾಗೂ ಸುರ್ಜೇವಾಲಾ ಮಾತುಕತೆ ನಡೆಸಿದ್ದಾರೆ.