ಬೆಂಗಳೂರು :ರಾಜ್ಯಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಇಲ್ಲಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಬಳಿಕ, ಶಿವಾನಂದ ವೃತ್ತದ ಬಳಿಯ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ಕೊಟ್ಟು ಮಧ್ಯಾಹ್ನದ ಭೋಜನ ಸವಿದು ಕೆಲಕಾಲ ಸಮಾಲೋಚನೆ ನಡೆಸಿದರು. ತಮ್ಮ ನಿವಾಸಕ್ಕೆ ಭೇಟಿ ನೀಡಿದ ಸುರ್ಜೇವಾಲ ಅವರನ್ನು ಸಿದ್ದರಾಮಯ್ಯ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಬೆಳ್ಳಿ ತಟ್ಟೆಯಲ್ಲಿ ಊಟ :ರಂದೀಪ್ ಸಿಂಗ್ ಸುರ್ಜೇವಾಲಾ ಇದೇ ಮೊದಲ ಬಾರಿಗೆ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದರಿಂದ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದ ಸಿದ್ದರಾಮಯ್ಯ, ಬೆಳ್ಳಿ ತಟ್ಟೆಯಲ್ಲಿ ಉಣಬಡಿಸಿದರು. ಭೋಜನ ಕೂಟದಲ್ಲಿ ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ, ಜಮೀರ್ ಅಹ್ಮದ್, ವಿಧಾನಪರಿಷತ್ ಕಾಂಗ್ರೆಸ್ ಪಕ್ಷದ ಸಚೇತಕ ನಾರಾಯಣಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿ ಮತ್ತಿತರ ನಾಯಕರಿದ್ದರು.
ಭೋಜನದ ಬಳಿಕ ಸಿದ್ದರಾಮಯ್ಯ- ಸುರ್ಜೇವಾಲಾ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು. ಇದಾದ ಬಳಿಕ ಕುಮಾರ ಕೃಪ ಅತಿಥಿಗೃಹಕ್ಕೆ ತೆರಳಿದ ಅವರು, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವು ನಾಯಕರ ಜೊತೆ ಸಮಾಲೋಚಿಸಿದರು. ಇಂದು ಸಂಜೆ ದೆಹಲಿಗೆ ತೆರಳಿಬೇಕಿರುವ ಹಿನ್ನೆಲೆ ಕುಮಾರ ಕೃಪಾ ಅತಿಥಿ ಗೃಹದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದತ್ತ ಪ್ರಯಾಣ ಬೆಳೆಸಿದರು.