ಬೆಂಗಳೂರು: ಯಡಿಯೂರಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿರುವುದು ಖಂಡನೀಯ. ಯಾರ ನಿವಾಸದ ಮೇಲೂ ದಾಳಿ ನಡೆಯಬಾರದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಬೊಮ್ಮಾಯಿ ಆಧುನಿಕ ಶಕುನಿ.. ಬೆಂಗಳೂರು ಹೊರವಲಯದಲ್ಲಿ ಇಂದು ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ದ್ವೇಷ ಹಾಗೂ ವಿಭಜನೆಯ ರಾಜಕೀಯ ಪರಿಶಿಷ್ಟ ಜಾತಿ ಹಾಗೂ ಸಮುದಾಯಗಳಲ್ಲಿ ಅಶಾಂತಿಗೆ ಕಾರಣವಾಗಿದೆ. ಬಿಜೆಪಿ ಹಾಗೂ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ ಆಧುನಿಕ ಶಕುನಿಯಾಗಿದ್ದಾರೆ. ಮಹಾಭಾರತದ ಕಾಲದಲ್ಲಿ ಶಕುನಿ ವಿಭಜನೆ ಮಾಡಿ ತನ್ನ ಕಾರ್ಯ ಸಾಧಿಸಿಕೊಳ್ಳುತ್ತಿದ್ದ. ಹೀಗಾಗಿ ಬೊಮ್ಮಾಯಿ ಅವರು ಆಧುನಿಕ ಶಕುನಿಯಾಗಿದ್ದಾರೆ ಎಂದು ಆರೋಪಿಸಿದರು.
ಪರಿಶಿಷ್ಟರಿಗೆ ಮಾಡುವ ಮೋಸವಲ್ಲವೇ?-ಸುರ್ಜೇವಾಲಾ:ಇವರು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳನ್ನು ವಿಭಜನೆ ಮಾಡುತ್ತಿದ್ದಾರೆ. ಮೀಸಲಾತಿ ಪ್ರಮಾಣದ ಮಿತಿ ಶೇ. 50ರಷ್ಟು ಇರುವಾಗ ಬಿಜೆಪಿಯವರು ಶೇ. 56ರಷ್ಟು ಮೀಸಲಾತಿಯನ್ನು ಹೇಗೆ ಜಾರಿ ಮಾಡಲಿದ್ದಾರೆ?. ಈ ವಿಚಾರದಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯವನ್ನು ಮೂರ್ಖರನ್ನಾಗಿಸುತ್ತಿರುವುದೇಕೆ? ಅವರು ಮೀಸಲಾತಿ ಹೆಚ್ಚಳದ ಕಾನೂನನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದೇ ಹೇಗೆ ಜಾರಿ ಮಾಡಲಿದ್ದಾರೆ?. ಇದು ಪರಿಶಿಷ್ಟರಿಗೆ ಮಾಡುವ ಮೋಸವಲ್ಲವೇ? ಎಂದಿದ್ದಾರೆ.
ಮೋದಿ ಅವರ ಸರ್ಕಾರ ಡಿ. 20, 2022 ಹಾಗೂ ಮಾರ್ಚ್ 14, 2023ರಂದು ಸಂಸತ್ತಿನಲ್ಲಿ ಪರಿಶಿಷ್ಟರ ಮೀಸಲಾತಿ ಹೆಚ್ಚಳವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಹಾಗಿದ್ದರೆ ಇದನ್ನು ಯಾರು ಜಾರಿ ಮಾಡಲಿದ್ದಾರೆ?. ಮೋದಿ ಅವರು ಈ ಪರಿಶಿಷ್ಟರ ಮೀಸಲಾತಿ ವಿಚಾರವಾಗಿ ಯಾಕೆ ಉತ್ತರ ನೀಡುತ್ತಿಲ್ಲ?. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ವಿಚಾರವಾಗಿ ತಂದಿರುವ ಕಾನೂನನ್ನು ಸಂವಿಧಾನದ 9ನೇ ಶೆಡ್ಯುಲ್ನಲ್ಲಿ ಸೇರಿಸಬೇಕು ಹಾಗೂ ಮೀಸಲಾತಿ ಮಿತಿಯನ್ನು ಶೇ. 50ರಿಂದ ವಿಸ್ತರಣೆ ಮಾಡಬೇಕು.
ಆಯೋಗದ ವರದಿ ಪಡೆಯದೆ ಮೀಸಲಾತಿ ಹೆಚ್ಚಳ- ಸುರ್ಜೇವಾಲಾ ಆರೋಪ: ಈ ಸರ್ಕಾರ ಒಕ್ಕಲಿಗರು, ಲಿಂಗಾಯತರು, ಮುಸಲ್ಮಾನ ಅಲ್ಪಸಂಖ್ಯಾತ ಸಮುದಾಯಗಳಿಗೆ ದ್ರೋಹ ಮಾಡುತ್ತಿದೆ. ಅವರು 90 ದಿನಗಳ ಅಂತರದಲ್ಲಿ 3 ಬಾರಿ ಮೀಸಲಾತಿ ವರ್ಗೀಕರಣ ಬದಲಿಸಿದ್ದಾರೆ. ಈ ಸರ್ಕಾರ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸದೇ ಪೂರಕವಾದ ಅಂಕಿಅಂಶಗಳು ಇಲ್ಲದೆ, ಹಿಂದುಳಿದ ವರ್ಗಗಳ ಆಯೋಗದ ಅಂತಿಮ ವರದಿ ಪಡೆಯದೇ ಮೀಸಲಾತಿ ಹೆಚ್ಚಳ ಮಾಡಿದ್ದು, ಈ ಮೀಸಲಾತಿ ತೀರ್ಮಾನಗಳು ಹೇಗೆ ಜಾರಿಗೆ ಬರಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಜನರನ್ನು ಎತ್ತಿಕಟ್ಟಿ ಹಗರಣ ಮುಚ್ಚಿಹಾಕುವ ಯತ್ನ- ಸುರ್ಜೇವಾಲಾ:ಈ ಸರ್ಕಾರ ಎಲ್ಲ ವರ್ಗಗಳನ್ನು ವಿಭಜಿಸಿ ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದೆ. ಒಕ್ಕಲಿಗ ಹಾಗೂ ಲಿಂಗಾಯತರನ್ನು ಮುಸ್ಲಿಂರ ವಿರುದ್ಧ ಎತ್ತಿ ಕಟ್ಟುವುದು, ಪರಿಶಿಷ್ಟ ಸಮುದಾಯಗಳ ನಡುವೆ ಪರಸ್ಪರ ಕಚ್ಚಾಟ ತರುವುದು. ಈ ಸರ್ಕಾರದ ಪ್ರಯತ್ನವಾಗಿದೆ. ಆ ಮೂಲಕ ಈ 40% ಸರ್ಕಾರದ ಹಗರಣಗಳನ್ನು ಮುಚ್ಚಿಹಾಕುವುದು ಸರ್ಕಾರದ ಕಾರ್ಯತಂತ್ರವಾಗಿದೆ ಎಂದು ಅವರು ಆರೋಪಿಸಿದರು.