ಬೆಂಗಳೂರು: ಬಿಜೆಪಿ ಸರ್ಕಾರವು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಆಶಯಗಳನ್ನು ವಂಚಿಸುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬೇಡ್ಕರ್ ಜಯಂತಿ ಶುಭಾಶಯ ಕೋರಿದರು.
ಬಿಜೆಪಿ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಲಿಂಗಾಯತರು ಸೇರಿದಂತೆ ಎಲ್ಲ ವರ್ಗದವರಿಗೂ ಅನ್ಯಾಯ ಮಾಡುವ ಕಾರ್ಯ ಮಾಡಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರ ಎಲ್ಲ ವರ್ಗದ ಜನರನ್ನು ವಂಚಿಸಿದೆ. ಕಳೆದ ಮೂರು ಸುದ್ದಿಗೋಷ್ಠಿಯಲ್ಲೂ ನಾನು ಇದೇ ವಿಚಾರವನ್ನು ಪ್ರಸ್ತಾಪಿಸುತ್ತಾ ಬಂದಿದ್ದೇನೆ. ನರೇಂದ್ರ ಮೋದಿ ಹಾಗೂ ಬೊಮ್ಮಾಯಿ ನೇತೃತ್ವದ 9 ಇಂಜಿನ್ ಸರ್ಕಾರಗಳು ಕರ್ನಾಟಕದ ಜನರಿಗೆ ದ್ರೋಹ ಮಾಡುತ್ತಿವೆ ಎಂದು ಕಿಡಿಕಾರಿದರು.
ಮೀಸಲಾತಿ ಎಂಬ ಹೆಸರಿನಲ್ಲಿ ಜನರಿಗೆ ಲಾಲಿಪಾಪ್ ನೀಡುವ ಕಾರ್ಯವನ್ನ ಬಿಜೆಪಿಯವರು ಮಾಡುತ್ತಿದ್ದಾರೆ. ಬಿಜೆಪಿ ಮೂಲ ಆಶಯ ಅರ್ಹರಿಗೆ ಮೀಸಲಾತಿ ತಪ್ಪಿಸುವುದೇ ಆಗಿದೆ. ಅನಗತ್ಯವಾಗಿ ಜಾತಿಗಳ ನಡುವೆ ಕಲಹವನ್ನು ಸೃಷ್ಟಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯ ಮಾಡುತ್ತಿವೆ. ಇಂದು ನಾವು ಎಲ್ಲಾ ಸಮುದಾಯದ ಜನರ ಪರವಾಗಿ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಲು ಬಯಸುತ್ತೇವೆ, ಯಾಕೆ ನೀವು ಜನರಿಗೆ ವಂಚನೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಮೀಸಲಾತಿ ಒಟ್ಟಾರೆ ಚಿತ್ರಣವನ್ನೇ ಬದಲಿಸಲು ಬಿಜೆಪಿ ಸರ್ಕಾರ ಹೊರಟಿದೆ. ಕಳೆದ 90 ದಿನಗಳಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ಪ್ರಕ್ರಿಯೆಯನ್ನು ಮೂರು ಸಾರಿ ಬದಲಿಸಿದೆ. ಇಂತಹ ಕಾರ್ಯ ಬಿಜೆಪಿ ಹಾಗೂ ಬಸವರಾಜ್ ಬೊಮ್ಮಾಯಿ ಅವರಿಂದ ಮಾತ್ರ ಸಾಧ್ಯ. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಸುರ್ಜೇವಾಲಾ ಟೀಕಿಸಿದರು.
ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಮೀಸಲಾತಿ ವಿಚಾರದಲ್ಲಿ ನೀಡಿರುವ ವರದಿಯನ್ನು ಯಾಕೆ ಇದುವರೆಗೂ ಬಿಜೆಪಿ ಬಿಡುಗಡೆ ಮಾಡುತ್ತಿಲ್ಲ. ಉದ್ದೇಶಪೂರ್ವಕವಾಗಿ ಈ ಸರ್ಕಾರ ಮೀಸಲಾತಿ ವರದಿಯನ್ನು ತಿರಸ್ಕರಿಸಲು ಮುಂದಾಗಿದೆ. ನಾಗಮೋಹನ್ ದಾಸ್ ವರದಿ ಜಾರಿಯಾಗುವುದು ಬಿಜೆಪಿ ಸರ್ಕಾರಕ್ಕೆ ಬೇಕಿಲ್ಲ. ನಾಲ್ಕು ವರ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ವರದಿಯನ್ನು ಜಾರಿಗೆ ತರಲು ಬಿಜೆಪಿ ಪ್ರಯತ್ನಿಸಲಿಲ್ಲ ಎಂದರು.
ಬಿಜೆಪಿ ಕಡೆಯ ಕ್ಷಣದಲ್ಲಿ ಕಣ್ಣೊರೆಸುವ ತಂತ್ರ ಮಾಡಿದೆ. 9ನೇ ಶೆಡ್ಯೂಲ್ಗೆ ಮೀಸಲಾತಿಯನ್ನು ಸೇರಿಸದೆ ಬೇಕಂತ ಜನರ ದಿಕ್ಕು ತಪ್ಪಿಸುವ ಚುನಾವಣೆ ಗಿಮಿಕ್ ಮಾಡಿದೆ. ಒಂದೆಡೆ ಮೀಸಲಾತಿಯನ್ನು ಘೋಷಿಸಿದ್ದಾಗಿ ಬೊಮ್ಮಾಯಿ ಸರ್ಕಾರ ವಿಧಾನಸಭೆಯಲ್ಲಿ ತಿಳಿಸಿದ್ದು, ಲೋಕಸಭೆಯಲ್ಲಿ ಮೋದಿ ಸರ್ಕಾರದ ಸಚಿವರು ಈ ರೀತಿ ಯಾವುದೇ ಪ್ರಸ್ತಾಪ ನಮಗೆ ತಲುಪಿಲ್ಲ ಎಂದು ಹೇಳಿದ್ದರು. ಇದು ಬಿಜೆಪಿ ಸರ್ಕಾರದ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಸಾಕಷ್ಟು ವಿವಾದ ಸೃಷ್ಟಿಯಾದ ಬಳಿಕ ತನಗೆ ಮುಜುಗರ ಆಗುತ್ತದೆ ಎಂದು ತಿಳಿದ ಬಿಜೆಪಿ ಸರ್ಕಾರ ತನ್ನ ಕಡೆಯ ಸಚಿವ ಸಂಪುಟ ಸಭೆಯಲ್ಲಿ ಮುಸ್ಲಿಮರಿಗೆ ಮೀಸಲಾಗಿದ್ದ ಮೀಸಲಾತಿಯನ್ನು ಕಿತ್ತು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಹಂಚಿಕೆ ಮಾಡಿದೆ. ಇದು ಕಾನೂನುರಿತ್ಯಾ ಅವಕಾಶ ಇಲ್ಲದೆ ನಡೆದಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಪರಿಗಣಿಸದೆ ಮೀಸಲಾತಿಯನ್ನು ಹಂಚಿಕೆ ಮಾಡಿರುವ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ ಎಂದು ಸುರ್ಜೇವಾಲಾ ವಾಗ್ದಾಳಿ ನಡೆಸಿದರು.
ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರ ಘೋಷಿಸಿರುವ ಮೀಸಲಾತಿ ವಿಚಾರದಲ್ಲಿ ನೀಡಿರುವ ಪ್ರತಿಕ್ರಿಯೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಬೇಕು. ಕಾನೂನಿನ ನಿಯಮಾವಳಿಗಳನ್ನು ಮೀರಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು ಸಿಎಂ ತಮ್ಮ ಸ್ಥಾನದಿಂದ ಕೆಳಗಿಳಿಯುವುದೇ ಸೂಕ್ತ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ: ಬಿಜೆಪಿಗೆ ಗುಡ್ ಬೈ ಹೇಳಿದ ಲಕ್ಷ್ಮಣ ಸವದಿ