ಬೆಂಗಳೂರು: ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದ ಹಿಂದೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷದ ರಾಜಕೀಯ ಪಿತೂರಿ ಇದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿರುವ ಅವರು, ಬಿಜೆಪಿ ಸರ್ಕಾರ ಸಿಬಿಐ ಸಂಸ್ಥೆಯನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡು ಕಾಂಗ್ರೆಸ್ ನಾಯಕರಾದ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿರುವುದು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿಯ ರಾಜಕೀಯ ಪಿತೂರಿಯನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ನಾಯಕರು ಇಂತಹ ಬೆದರಿಕೆ ತಂತ್ರಗಳಿಗೆ ಎಂದಿಗೂ ಜಗ್ಗುವುದಿಲ್ಲ ಎಂಬುದನ್ನು ಯಡಿಯೂರಪ್ಪ ಅರ್ಥಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ಅಸ್ಥಿರವಾಗಿರುವ ಯಡಿಯೂರಪ್ಪ ಸರ್ಕಾರವು ತನ್ನ ಮುಂಚೂಣಿ ಘಟಕಗಳಾದ ಸಿಬಿಐ ಹಾಗೂ ಇಡಿ ಬಳಸಿಕೊಂಡು ಡಿಕೆ ಶಿವಕುಮಾರ್, ಡಾ. ಜಿ ಪರಮೇಶ್ವರ್, ವಿನಯ್ ಕುಲಕರ್ಣಿ ಸೇರಿದಂತೆ ಇನ್ನಿತರ ಕಾಂಗ್ರೆಸ್ ನಾಯಕರನ್ನು ಹೆಣೆಯಲು ಯತ್ನಿಸುತ್ತಿದೆ. ಈ ತಂತ್ರಗಳು ಜನರಿಗಾಗಿ ಹೋರಾಡುವ ನಮ್ಮ ಸಂಕಲ್ಪ ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂಬುದನ್ನು ಬಿಜೆಪಿ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸುರ್ಜೆವಾಲಾ ಟ್ವೀಟ್ನಲ್ಲಿ ಎಚ್ಚರಿಸಿದ್ದಾರೆ.