ಕರ್ನಾಟಕ

karnataka

ETV Bharat / state

ಮಲ್ಲಿಕಾರ್ಜುನ ಖರ್ಗೆ, ಕುಟುಂಬಸ್ಥರ ಹತ್ಯೆಗೆ ಬಿಜೆಪಿ ನಾಯಕನ ಸಂಚು: ಸುರ್ಜೇವಾಲ ಗಂಭೀರ ಆರೋಪ - ಕರ್ನಾಟಕ ವಿಧಾನಸಭಾ ಚುನಾವಣೆ 2023

ಮಲ್ಲಿಕಾರ್ಜುನ​ ಖರ್ಗೆ ಹಾಗೂ ಅವರ ಕುಟುಂಬದವರ ಹತ್ಯೆಗೆ ಸಂಚು ನಡೆದಿದ್ದರೂ ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ ಎಂದು ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದರು.

Randeep Singh Surjewala
ರಣದೀಪ್ ಸಿಂಗ್ ಸುರ್ಜೇವಾಲ

By

Published : May 6, 2023, 10:44 AM IST

Updated : May 6, 2023, 12:01 PM IST

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲ

ಬೆಂಗಳೂರು: ಬಿಜೆಪಿ ತನ್ನ ದ್ವೇಷದ ಮೂಲಕ ಕರ್ನಾಟಕದ ಮಣ್ಣಿನ ಮಗ ಮಲ್ಲಿಕಾರ್ಜುನ​ ಖರ್ಗೆ ಹಾಗೂ ಅವರ ಕುಟುಂಬವನ್ನು ಕೊಲ್ಲುವ ಸಂಚು ರೂಪಿಸಿ ಪಾಪದ ಕೃತ್ಯ ಎಸಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಣಿಕಂಠ ರಾಥೋಡ್ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಅವರ ಆತ್ಮೀಯ ನೀಲಿ ಕಂಗಳ ಹುಡುಗ ಹಾಗೂ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಆಡಿಯೋದಲ್ಲಿ ಈ ಸಂಚು ಸ್ಪಷ್ಟವಾಗಿದೆ ಎಂದು ಸುರ್ಜೇವಾಲ ಆರೋಪಿಸಿದ್ದಾರೆ.

ಇದೀಗ ಖರ್ಗೆಯವರ ಕುಟುಂಬ ಆತಂಕದಲ್ಲಿದೆ. ಹತ್ಯೆಗೆ ಸಂಚು ನಡೆದಿದ್ದರೂ ಮೋದಿ ಹಾಗೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿ ಮಲ್ಲಿಕಾರ್ಜುನ್​ ಖರ್ಗೆ, ಅವರ ಪತ್ನಿ ಸೇರಿದಂತೆ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಸಂಚು ರೂಪಿಸಿದೆ ಎಂದು ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ಕನ್ನಡ ನಾಡಿನ ಮಗ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ದ್ವೇಷ ಕಾರುತ್ತ ಬಂದಿದೆ. ಖರ್ಗೆ ಅವರು ದಲಿತ ಹಾಗೂ ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಬೆಳೆದು ಬಂದಿರುವುದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಅವರ ವಿರುದ್ಧ ಸಂಚು ರೂಪಿಸುತ್ತಿದೆ. ಫೆ.27, 2023ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಛತ್ರಿ ಕೆಳಗೆ ನಿಂತಿಲ್ಲ ಎಂದು ಹೇಳುವ ಮೂಲಕ ಲೇವಡಿ ಮಾಡಿದ್ದರು. ಬಿಜೆಪಿಯ ದ್ವೇಷಪೂರಿತ ಹೇಳಿಕೆ ಅಲ್ಲಿಗೆ ನಿಲ್ಲಲಿಲ್ಲ. ಮೇ 02, 2023ರಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜಸ್ಥಾನದ ಶಾಸಕ ಹಾಗೂ ಪ್ರಧಾನ ಕಾರ್ಯದರ್ಶಿ ಮದನ್ ದಿಲಾವರ್, ಖರ್ಗೆ ಅವರಿಗೆ 80 ವರ್ಷ ವಯಸ್ಸಾಗಿದೆ. ದೇವರು ಅವರನ್ನು ಯಾವಾಗ ಬೇಕಾದರೂ ಕರೆಸಿಕೊಳ್ಳಬಹುದು ಎಂದು ಹೇಳುತ್ತ ಖರ್ಗೆ ಅವರ ಸಾವನ್ನು ಬಯಸಿದ್ದರು. ಈಗ ಬಿಜೆಪಿ ನಾಯಕರು ಬಹಿರಂಗವಾಗಿ ಖರ್ಗೆ ಹಾಗೂ ಅವರ ಕುಟುಂಬದ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ಚುನಾವಣೆ ಸೋಲುವ ಹತಾಷೆಯಲ್ಲಿ ಬಿಜೆಪಿ ಹಾಗೂ ಅದರ ನಾಯಕರು ಅತ್ಯಂತ ಭಯಾನಕ ಹಂತಕ್ಕೆ ತಲುಪಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ರೂಪಿಸಿರುವ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡದೆ ತಮ್ಮ 40 ಪರ್ಸೆಂಟ್​ ಕಮಿಷನ್ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಪ್ರತಿನಿತ್ಯ ಭಾವನಾತ್ಮಕ ವಿಚಾರದ ಬಗ್ಗೆ ಮಾತನಾಡಿ ಸಮಾಜ ಒಡೆಯುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಸುರ್ಜೇವಾಲ ದೂರಿದರು.

ಬಸವಣ್ಣನ ನಾಡು ಸಾಮರಸ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡ ನಾಡಿನ ಈ ಪರಂಪರೆಯ ಮೇಲೆ ಈಗ ದಾಳಿಯಾಗುತ್ತಿದೆ. ಇದು ಕೇವಲ ಖರ್ಗೆ ಅವರ ಮೇಲೆ ದಾಳಿಯ ಸಂಚು ಮಾತ್ರವಲ್ಲ. ಕನ್ನಡಿಗರ ಮೇಲೆ ದಾಳಿ ಮಾಡುವ ಸಂಚು. ಇಷ್ಟೆಲ್ಲಾ ಆದರೂ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗ ಮೌನಕ್ಕೆ ಶರಣಾಗಿದೆ. ಆದರೆ ರಾಜ್ಯದ 6.50 ಕೋಟಿ ಕನ್ನಡಿಗರು ಈ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಣಿಕಂಠ ರಾಥೋಡ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಸುರ್ಜೇವಾಲ ಬಿಡುಗಡೆ ಮಾಡಿದರು.

ಇದನ್ನೂ ಓದಿ:ದಲಿತ ನಾಯಕ ಖರ್ಗೆ ಸಾವು ಬಯಸಿದ ನಿಮ್ಮ ಶಾಸಕನ ವಿರುದ್ಧ ಕ್ರಮವಿಲ್ಲವೇ?: ಮೋದಿಗೆ ಸುರ್ಜೇವಾಲಾ ಪ್ರಶ್ನೆ

Last Updated : May 6, 2023, 12:01 PM IST

ABOUT THE AUTHOR

...view details