ಬೆಂಗಳೂರು: ನಮ್ಮ ನಾಯಕರ ಜೊತೆ ಸಬೆ ನಡೆಸಿ ರಾಜಕೀಯ ಸ್ಥಿತಿ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬೊಮ್ಮಾಯಿ ಸರ್ಕಾರ ಸಂಪೂರ್ಣ ವಿಫಲ ಆಗಿದೆ. 40% ಕಮಿಷನ್ ಸರ್ಕಾರವಿದು. ಕೆಲ ಸಂಘಟನೆಗಳ ಮೂಲಕ ಜನರನ್ನು ಕೊಲ್ಲುವ ಕೆಲಸ ಆಗುತ್ತಿದೆ. ಜನರು ಭಯಭೀತರಾಗಿದ್ದಾರೆ. ಮಂಗಳೂರು, ಶಿವಮೊಗ್ಗ ಘಟನೆಗಳೇ ಇದಕ್ಕೆ ಸಾಕ್ಷಿ. ಸರ್ಕಾರ ಹೇಗೆ ನಡೆಯುತ್ತಿದೆ ಅಂತಾ ಅವರದೇ ಸಚಿವ ಮಾಧುಸ್ವಾಮಿ ಮಾತನಾಡಿದ್ದಾರೆ. ಇದಕ್ಕೆಲ್ಲ ಸರ್ಕಾರ ಉತ್ತರ ಕೊಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಒತ್ತಾಯಿಸಿದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುರ್ಜೇವಾಲಾ ನೇತೃತ್ವದಲ್ಲಿ ಸಭೆ ನಡೆಯಿತು. ದೆಹಲಿಯಲ್ಲಿ ಹಿರಿಯ ನಾಯಕರ ಮಹತ್ವದ ಸಭೆ ನಡೆಯಲಿದ್ದು, ಸುರ್ಜೇವಾಲಾ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೆಹಲಿಗೆ ಪಯಣ ಬೆಳೆಸಲಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸಭೆ ಬಳಿಕ ಸುರ್ಜೇವಾಲಾ ಮಾತನಾಡಿ, ಬಿಜೆಪಿ ಸರ್ಕಾರದ ವಿರುದ್ಧ ಟೀಕೆಗಳ ಮಳೆ ಸುರಿಸಿದ್ದಾರೆ. ಸಮಾಜವನ್ನು ಒಡೆಯುವ ಪ್ರಯತ್ನ ನಡೆಸಿದೆ. ಬಿಜೆಪಿ ಸರ್ಕಾರ ಜನರ ವಿರುದ್ಧವಾಗಿದೆ. ಮಂಗಳೂರು, ಶಿವಮೊಗ್ಗದಲ್ಲಿ ಹಲವು ಘಟನೆ ಗಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಾಧುಸ್ವಾಮಿ ಒಬ್ಬ ಹಿರಿಯ ಸಚಿವರು. ನಮ್ಮ ಸರ್ಕಾರದಲ್ಲಿ ಆಡಳಿತ ನಡೆಯುತ್ತಿಲ್ಲ. ಸರ್ಕಾರವನ್ನು ತಳ್ಳಿಕೊಂಡು ಹೋಗ್ತಿದ್ದೇವೆ ಅಂದಿದ್ದಾರೆ. ಈ ಸತ್ಯ ಮುಚ್ಚಲು ಬೊಮ್ಮಾಯಿ ಮುಂದಾಗಿದ್ದಾರೆ. ಬೊಮ್ಮಾಯಿ ಈ ಸರ್ಕಾರವನ್ನು ಸರಿಯಾಗಿ ನಡೆಸ್ತಿದ್ದಾರಾ? ರಾಜ್ಯದಲ್ಲಿ ಸರ್ಕಾರ ಇದೆಯಾ? ರಾಜ್ಯದ ಜನ ಚುನಾವಣೆ ಯಾವಾಗ ಬರುತ್ತೆ ಅಂತ ಕಾಯ್ತಿದ್ದಾರೆ. ಪ್ರವೀಣ್ ಹತ್ಯೆಯಾದಾಗ ಅವರ ಕಾರ್ಯಕರ್ತರೇ ನಮಗೆ ರಕ್ಷಣೆ ಇಲ್ಲ ಅಂತ ಗಲಾಟೆ ಮಾಡಿದ್ದಾರೆ. ಈ ಎಲ್ಲದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.