ಬೆಂಗಳೂರು: ಕೇವಲ ಮಾಧ್ಯಮಗಳ ಮೂಲಕ ಜನಪ್ರಿಯತೆ ಪಡೆಯುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಅರೆಬರೆ ಮುಕ್ತಾಯವಾದ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಆರಂಭ ಹಾಗೂ ಅಂತ್ಯ ಸಿದ್ಧವಾಗದ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಈ ಮೂಲಕ ನಕಲಿ ಜನಪ್ರಿಯತೆಗೋಸ್ಕರ ಬೆಂಗಳೂರಿನ ಜನರ ಬದುಕನ್ನು ಪಣಕ್ಕಿಡುತ್ತಿದ್ದಾರೆ. ಅರ್ಧ ಮುಕ್ತಾಯಗೊಂಡಿರುವ ಕಾಮಗಾರಿಯನ್ನು ಉದ್ಘಾಟಿಸುವ ಅಗತ್ಯ ಏನಿದೆ? ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಗಿಮಿಕ್ ಮಾಡುತ್ತಿದ್ದಾರೆ ಎಂದು ದೂರಿದರು.
ಈ ರೀತಿ ನಾಲ್ಕು ಕಾಮಗಾರಿಯನ್ನು ಅವರು ಅರೆಬರೆ ಆಗಿರುವಾಗಲೇ ಉದ್ಘಾಟಿಸುತ್ತಿದ್ದಾರೆ. ಮೆಟ್ರೋ ಕಾಮಗಾರಿ ಜೊತೆ ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಸಹ ಉದ್ಘಾಟಿಸಿದ್ದಾರೆ. ಈ ನಾಲ್ಕು ಕಾಮಗಾರಿಗಳು ಪೂರ್ಣಗೊಳ್ಳುವ ಮುನ್ನವೇ ಉದ್ಘಾಟಿಸಿದ್ದು, ರಾಜ್ಯದಲ್ಲಿ ಬರುತ್ತಿರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ಕಾರ್ಯ ಎನ್ನುವುದು ಸ್ಪಷ್ಟವಾಗಿ ಅರಿವಾಗುತ್ತದೆ.
ಪ್ರಾರಂಭ, ಅಂತ್ಯದ ಸಂಪರ್ಕ ಕಲ್ಪಿಸದೆ ಕೇವಲ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಕಾಮಗಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿದ್ದಾರೆ. ಇದು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಜ್ಯ ನಾಯಕರು ಕೇವಲ ಮಾಧ್ಯಮ ಪ್ರಚಾರಕ್ಕಾಗಿ ನಡೆಸುತ್ತಿರುವ ಉದ್ಘಾಟನಾ ಕಾರ್ಯಕ್ರಮವಾಗಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಆರ್ಪುರ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 13 ಕಿಮೀ ಉದ್ದನೆ ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಕಾಲಾವಧಿ ಬೇಕು. ಹೀಗಿರುವಾಗಲೇ ಅತ್ಯವಸರದಲ್ಲಿ ಮೆಟ್ರೋ ಮಾರ್ಗ ಉದ್ಘಾಟಿಸುವ ಅಗತ್ಯ ಏನಿತ್ತು?
ಜನರಿಗೆ ಅಗತ್ಯವಿರುವ ಪ್ರಮಾಣದಲ್ಲಿ ಬಿಎಂಟಿಸಿ ಬಸ್ಗಳಿಲ್ಲ. ನಗರಕ್ಕೆ ಇನ್ನೂ 8000 ಬಸ್ಗಳ ಅಗತ್ಯ ಇದೆ. ಈ ಮಧ್ಯ ಮೆಟ್ರೋ ಸಂಪರ್ಕ ಮಾರ್ಗಕ್ಕೆ ಬಸ್ಗಳನ್ನು ಓಡಿಸಲು ಸರ್ಕಾರ ತೀರ್ಮಾನಿಸಿದೆ. ಯಾವುದೇ ರೀತಿಯಲ್ಲೂ ನಿಯೋಜಿತ ರೀತಿಯ ಕಾರ್ಯಕ್ರಮವನ್ನು ಬಿಜೆಪಿ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಕೆಆರ್ ಪುರದಿಂದ ವೈಟ್ ಫೀಲ್ಡ್ ನಡುವಿನ ಸಂಪರ್ಕದ ರೈಲು ಮಾರ್ಗ ಸಹ ಯಾವುದೇ ಪ್ರಗತಿ ಹೊಂದಿಲ್ಲ. ಯಾವುದೇ ರೈಲು ನಿಲ್ದಾಣಗಳು ಸಹ ನಿರ್ಮಾಣ ಪೂರ್ಣಗೊಂಡಿಲ್ಲ. ಕೇವಲ 15 ದಿನಗಳ ಹಿಂದೆ ಮೆಟ್ರೋ ರೈಲು ವ್ಯವಸ್ಥಾಪಕರು ವೈಟ್ ಫೀಲ್ಡ್ ಹಾಗೂ ಕೆಆರ್ ಪುರಂ ನಡುವಿನ ರೈಲು ಮಾರ್ಗವನ್ನು ಪರಿಶೀಲಿಸಿದ್ದು, ಸಾಕಷ್ಟು ಸುಧಾರಣೆ ಅಗತ್ಯವಿದೆ ಎಂದು ವರದಿ ಸಲ್ಲಿಸಿದ್ದಾರೆ. ಮೆಟ್ರೋ ಸುರಕ್ಷತೆಯ ಆಯುಕ್ತರು ಪರಿಶೀಲನೆ ನಡೆಸಿದ್ದು, ಒಂದು ಮಾರ್ಗದ ಸಂಚಾರ ಮಾತ್ರ ಸಾಧ್ಯ ಎಂದಿದ್ದಾರೆ. ಗರುಡಾಚಾರ್ ಪಾಳ್ಯ ಹಾಗೂ ಕೆಆರ್ ಪುರ ನಡುವೆ ಕೇವಲ ಒಂದು ಮಾರ್ಗದಲ್ಲಿ ಮಾತ್ರ ರೈಲು ಸಂಚಾರ ಸಾಧ್ಯ ಎಂದಿದ್ದಾರೆ. ಇಂಥ ಸಂದರ್ಭದಲ್ಲಿ ಉದ್ಘಾಟನೆ ನಡೆಸುತ್ತಿರುವುದು ಜನರನ್ನು ಅಪಾಯಕ್ಕೆ ಒಳಪಡಿಸಿದಂತೆ ಅಲ್ಲವೇ? ಕೇವಲ ಚುನಾವಣೆಯಲ್ಲಿ ಗೆಲ್ಲುವ ಆಸೆಗೆ ಜನರನ್ನು ಅಪಾಯಕ್ಕೆ ತಳ್ಳುವುದು ಸರಿಯಲ್ಲ ಎಂದರು.
ರೈಲಿನ ನಿಗದಿತ ವೇಗ ಕಡಿಮೆ ಆಗುವ ಜೊತೆಗೆ ಕೆಲವು ಕಡೆ ಇನ್ನೊಂದು ಟ್ರೈನು ಹಾದು ಹೋಗುವ ಸಲುವಾಗಿ ಕಾಯುತ್ತಾ ನಿಲ್ಲುವ ಪರಿಸ್ಥಿತಿ ಎದುರಾಗಲಿದೆ. ಈ ರೀತಿ ಪರಿಸ್ಥಿತಿ ಇರುವಾಗ ನರೇಂದ್ರ ಮೋದಿಯವರೇ ಯಾಕೆ ಇಂತಹ ರೈಲು ಮಾರ್ಗವನ್ನು ಉದ್ಘಾಟಿಸುತ್ತಿದ್ದೀರಿ? ಇದರ ಅಗತ್ಯ ಇದೆಯೇ? ನಿಲ್ದಾಣದ ಕೆಳಗಡೆ ಓಡಾಟದ ಸ್ಥಳ ಸಹ ನಿರ್ಮಾಣ ಆಗಿಲ್ಲ. ವಿದ್ಯುತ್ ಚಾಲಿತ ರೈಲು ಸಂಚಾರದಲ್ಲಿ ಸಮಸ್ಯೆ ಇರುವಾಗ ಜನ ಒಂದೆಡೆಯಿಂದ ಇನ್ನೊಂದೆಡೆ ತೆರಳಲು ಇಷ್ಟೊಂದು ಅಪಾಯ ಎದುರಿಸುವ ಅಗತ್ಯ ಇದೆಯೇ?
ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರ ನಿಲ್ದಾಣಗಳಲ್ಲಿ ಹೆಚ್ಚುವರಿ ದ್ವಾರಗಳು ಸಹ ಇಲ್ಲ. ಸೂಕ್ತ ಭದ್ರತೆ ಇಲ್ಲದ ಹಿನ್ನೆಲೆ ಜನ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ನಡೆಸಬಹುದು. ಈ ರೀತಿ ಅಪೂರ್ಣ ರೈಲು ನಿಲ್ದಾಣವನ್ನು ಉದ್ಘಾಟಿಸುವ ಅಗತ್ಯ ಏನಿದೆ? ಅಗ್ನಿ ಸುರಕ್ಷತಾ ಸಾಧನಗಳನ್ನು ಸಹ ಕೆಲವೆಡೆ ಇನ್ನೂ ಅಳವಡಿಸಿ ಆಗಿಲ್ಲ. ಮಹದೇವಪುರ ರೈಲು ನಿಲ್ದಾಣದಲ್ಲಿ ಸಂಪರ್ಕ ಕೊಂಡಿಗಳು ಸಹ ಸರಿಯಾಗಿ ಸಿದ್ಧವಾಗಿಲ್ಲ. ನಾವು ಪ್ರಧಾನಿ, ಸಿಎಂಗೆ ಐದು ಪ್ರಶ್ನೆ ಕೇಳುತ್ತೇವೆ. ಯಾಕೆ ಅಪೂರ್ಣ ರೈಲು ಮಾರ್ಗ ಉದ್ಘಾಟನೆ ಮಾಡುತ್ತಿದ್ದೀರಿ. ಇನ್ನೂ ಆರು ತಿಂಗಳು ನಿರ್ಮಾಣ ಅಗತ್ಯವಿರುವ ಮಾರ್ಗ ಉದ್ಘಾಟನೆ ಅಗತ್ಯವೇ? ಮಾರ್ಗ ಪೂರ್ಣಗೊಳ್ಳದ ಸ್ಥಳದಲ್ಲಿ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸುವುದು ಎಷ್ಟು ಸರಿ? 58 ಲೋಪಗಳನ್ನು ಮೆಟ್ರೋ ರೈಲು ಆಯುಕ್ತರು ತೋರಿಸಿದ ಬಳಿಕವೂ ಉದ್ಘಾಟನೆ ಅಗತ್ಯವೇ? ಬೆಂಗಳೂರು ಪ್ರಯಾಣಿಕರ ಬದುಕನ್ನು ಪಣಕ್ಕಿಟ್ಟು ಮಾರ್ಗ ಉದ್ಘಾಟನೆ ಅಗತ್ಯವೇ? ಎಂದು ಕೇಳಿದರು.
ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮತ್ತಿತರ ನಾಯಕರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ:ದಲಿತ ಸಮುದಾಯದ ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆ