ಬೆಂಗಳೂರು : ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಪೂರ್ಣ ಪ್ರಮಾಣದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಬಳಸಿಕೊಳ್ಳುವ ಚಿಂತನೆ ಇದ್ದು ಈ ಸಂಬಂಧ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2,000 ಹಾಸಿಗೆಗಳಿವೆ. ಕೆ. ಸಿ. ಜನರಲ್ ಆಸ್ಪತ್ರೆ 400, ಜಯನಗರ ಆಸ್ಪತ್ರೆ 400, ಕಿಮ್ಸ್ 1,000 ಹಾಸಿಗೆಗಳು ಸಿಗುತ್ತವೆ. ಅವಶ್ಯವಿದ್ದರೆ ಅವಶ್ಯವಿದ್ದರೆ ಕೊವಿಡ್ -19ಗೆ ಬಳಸಲಾಗುತ್ತದೆ. ಬೇರೆ ಬೇರೆ ಕಡೆ ಇರುವ ರೋಗಿಗಳನ್ನು ಒಂದೆಡೆ ಸೇರಿಸಿ ಚಿಕಿತ್ಸೆ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಹಾಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ರೋಗಿಗಳನ್ನು ಇತರೆ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ವಿಕ್ಟೋರಿಯಾ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದರು.