ಬೆಂಗಳೂರು:ಹೆಸರಿನಲ್ಲಿ 'ರಾಮ' ಉಂಡ ಮನೆಗೆ ಪಂಗನಾಮ. ಸ್ವಯಂ ಘೋಷಿತ ಸತ್ಯಹರಿಶ್ಚಂದ್ರ ಎಷ್ಟೇ ಆದರೂ, ಸತ್ಯ ನಿಮಗೆ ಅಪಥ್ಯ ಅಲ್ಲವೇ? ಕಳ್ಳಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗುವುದಿಲ್ಲ ಎಂಬ ಹುಂಬುತನವೇ?. ಸುಳ್ಳೇ ನಿಮ್ಮ ರಾಜಕೀಯ ಅಸ್ತಿತ್ವದ ಪ್ರತೀಕ. ಸುಳ್ಳು ಸುಳ್ಳೇ ನಿಮ್ಮ ನರಿಬುದ್ಧಿ ಅವಕಾಶವಾದಿ ರಾಜಕಾರಣ ನಿಜಸ್ವರೂಪ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಬಿ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು. ದಾಸಶ್ರೇಷ್ಠ ಶ್ರೀ ಪುರಂದರದಾಸರು ಮಾಜಿ ಸಿ.ಎಂ. ಸಿದ್ದರಾಮಯ್ಯನಂತವರನ್ನು ನೋಡಿಯೇ ಈ ಪದವನ್ನು ಬರೆದಿರಬೇಕು. ಏಕೆಂದರೆ ನೀವು ಜೀವನದಲ್ಲಿ ಇನ್ನೊಬ್ಬರನ್ನು ಮುಗಿಸಿಯೇ ಮೇಲಕ್ಕೆ ಬಂದ ಮಹಾಪುರುಷ ಅವತಾರಲ್ಲವೇ? ಸುಳ್ಳೇ ನಮ್ಮ ಮನೆದೇವರು ಎಂಬುದನ್ನು ನಿಮ್ಮನ್ನು ನೋಡಿ ಕಲಿಯಬೇಕು. ಏಕೆಂದರೆ ನೀವು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ಇಂತಹ ಕಲೆ ನಿಮಗಲ್ಲದೆ ಬೇರೆಯವರಿಗೆ ಬರಲು ಹೇಗೆ ಸಾಧ್ಯ? ಸುಳ್ಳಿನ ರಾಮಯ್ಯನವರೇ? ಮಾತೆತ್ತಿದರೆ ಅಹಿಂದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ನೀವು, 2018 ರ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ ಪರಮೇಶ್ವರ್ ಅವರಿಗೆ ಕೊರಟಗೆರೆಯಲ್ಲಿ ಬೆನ್ನಿಗೆ ಚೂರಿ ಹಾಕಿದ್ದು ಯಾಕೆ?. ಯಾವ ಯಾವ ಸಂದರ್ಭದಲ್ಲಿ ಯಾರ ಕುತ್ತಿಗೆ ಕೊಯ್ದಿರಿ ಎಂಬುದನ್ನು ಬಹಿರಂಗ ಪಡಿಸಲೇ ಚೂರಿ ರಾಮಯ್ಯನವರೇ? ಎಂದು ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಸಿದ್ದು ಕುಟುಕಿದ ಶ್ರೀರಾಮುಲು: ಯಾರೋ ಕಟ್ಟಿದ ಹುತ್ತಕ್ಕೆ ಕರಿ ನಾಗನಂತೆ ಸೇರಿಕೊಂಡ ನೀವು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಕೆ ಹೆಚ್ ಮುನಿಯಪ್ಪ, ಅಲ್ಪಸಂಖ್ಯಾತ ಸಮುದಾಯದ ಜಾಫರ್ ಷರೀಪ್ ಸೇರಿದಂತೆ ಹಲವರನ್ನು ಮುಗಿಸಿಯೇ ಮೇಲಕ್ಕೆ ಬಂದ ನಿಮ್ಮದು ಯಾವ ಸೀಮೆಯ ಅಹಿಂದ ?. ಬಿಡಿಸಿ ಹೇಳುತ್ತೀರಾ? ಅಹಿಂದ ನಾಯಕರನ್ನು ಮುಗಿಸಿರುವ ನಿಮ್ಮ ಮುಂದಿನ ಗುರಿ ಒಕ್ಕಲಿಗರಾ? ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಇರಬಹುದೇ? ಎಂದು ಕುಟುಕಿದ್ದಾರೆ.
ಸಿಎಂರಿಂದ ಸಕಾರಾತ್ಮಕ ಪ್ರತಿಕ್ರಿಯೆ: ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಾತಿ ಪ್ರಮಾಣವನ್ನು 3% ರಿಂದ 7.5% ಹೆಚ್ಚಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಜಾರಿಗೊಳಿಸುಂತೆ ನಮ್ಮ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೀಸಲಾತಿ ಸಂಬಂಧ ನಾಗಮೋಹನ್ ದಾಸ್ ವರದಿ ನೀಡಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ನಾವು ಬಿಡೋದಿಲ್ಲ: ಸಾರಿಗೆ ಸಚಿವ ಶ್ರೀರಾಮುಲು ವಾಗ್ದಾಳಿ
ಸುಭಾಷ್ ಆಡಿಯ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿರುವ ವರದಿ ಪರಿಶೀಲನಾ ಹಂತದಲ್ಲಿದೆ. ಅದಷ್ಟು ಶೀಘ್ರ ನಮ್ಮ ಸಮುದಾಯಕ್ಕೆ ಸಿಹಿ ಸುದ್ದಿಯನ್ನು ನಮ್ಮ ಸರ್ಕಾರವೇ ಕೊಡಲಿದೆ. ಈ ಬಗ್ಗೆ ಯಾರಿಗೂ ಸಂಶಯವೇ ಬೇಡ. ಮೀಸಲಾತಿ ಸಂಬಂಧ ನಾನು ಹೇಳಿರುವ ಮಾತಿನಿಂದ ಒಂದು ಇಂಚು ಹಿಂದೆ ಸರಿಯಲ್ಲ. ನಾನು ಅದಕ್ಕೆ ಬದ್ಧನಾಗಿದ್ದೇನೆ. ಇದು ಕಾನೂನಿನ ವಿಷಯವಾಗಿದ್ದು, ಸ್ವತಃ ವಕೀಲರಾಗಿರುವ ನಿಮಗೆ ಅರ್ಥವಾಗದಿರುವುದಕ್ಕೆ ನನಗೆ ವಿಷಾದವಿದೆ ಎಂದು ಅವರು ಹೇಳಿದರು.