ಬೆಂಗಳೂರು: ರೈತರೇ ನೆನಪಿರಲಿ, ಕಾಂಗ್ರೆಸ್ ನಿಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುತ್ತಿದೆ ಎಂಬುದನ್ನು ಅರಿಯಿರಿ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಸಂವಿಧಾನ ಎಲ್ಲಾ ಹಕ್ಕುಗಳನ್ನು ನೀಡಿದೆ. ಮಾತುಕತೆ ಮೂಲಕ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳಬಹುದಾಗಿದೆ. ಅದು ಬಿಟ್ಟು ಪ್ರಜಾಪ್ರಭುತ್ವ ವಿರೋಧಿ ಕೃತ್ಯದಲ್ಲಿ ತೊಡಗದಿರಿ. ರೈತರೇ ನೆನಪಿರಲಿ, ಕಾಂಗ್ರೆಸ್ ನಿಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುತ್ತಿದೆ ಎಂಬುದನ್ನು ಅರಿಯಿರಿ. ಕೃಷಿ ಕಾಯ್ದೆ ಕುರಿತು ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಲೇ ಇವೆ. ಈಗಲೂ ದಿಲ್ಲಿಯ ಹಿಂಸಾಚಾರಕ್ಕೆ ಪ್ರತಿಪಕ್ಷಗಳ ಹುನ್ನಾರವೇ ಕಾರಣವಾಗಿದೆ. ಅನ್ನ ನೀಡುವ ಕೈಗಳು ಇಂತಹ ಷಡ್ಯಂತ್ರಕ್ಕೆ ಮರುಳಾಗಿ ಕತ್ತಿ ಹಿಡಿಯಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಪ್ರತಿಭಟನೆ ಮಾಡುವ, ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡುವ ಹಕ್ಕು ಎಲ್ಲರಿಗೂ ಇದೆ. ಆದರೆ ನಿಮ್ಮೆಲ್ಲಾ ಬೇಡಿಕೆ ಈಡೇರಿಸುತ್ತೇವೆ ಎಂದರೂ ದಿಲ್ಲಿಯಲ್ಲಿ ಪ್ರತಿಭಟನೆ ಹೆಸರಿನಲ್ಲಿ ನಡೆಸುತ್ತಿರುವ ಹಿಂಸಾಚಾರ, ಪೊಲೀಸರ ಮೇಲೆ ದಾಳಿ ಮಾಡಿದ್ದು ಸರಿಯಲ್ಲ. ರೈತರೇ, ಕುತಂತ್ರಿಗಳ ಮಾತು ಕೇಳದಿರಿ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಕುಟುಕಿದ್ದಾರೆ.
ದೆಹಲಿಯಲ್ಲಿ ನಡೆದ ಗಲಭೆ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮುಖವಾಡವನ್ನು ಕಳಚಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಅನ್ನ ನೀಡುವ ರೈತ ಭೂತಾಯಿಯಷ್ಟೇ ಸಹನಾಮಯಿ. ನೇಗಿಲ ಹಿಡಿಯುವ ಯೋಗಿ ಎಂದೂ ಅಸ್ತ್ರ ಹಿಡಿಯುವುದಿಲ್ಲ. ತುತ್ತು ನೀಡುವ ಅನ್ನದಾತ ಎಂದೂ ನೆತ್ತರು ಹರಿಸುವುದಿಲ್ಲ. ದೇಶದ ಬೆನ್ನೆಲುಬಾಗಿರುವ ಕೃಷಿಕ ಎಂದೂ ದೇಶ ತಲೆತಗ್ಗಿಸುವ ಕೆಲಸ ಮಾಡಲಾರ. ರೈತ ಬಾಂಧವರನ್ನು ದಿಕ್ಕು ತಪ್ಪಿಸುತ್ತಿರುವ ಕಾಣದ ಕೈಗಳು ಇನ್ನಾದರೂ ತಮ್ಮ ಹಿತಾಸಕ್ತಿಗಳು, ರಾಜಕೀಯ ದುರುದ್ದೇಶಗಳನ್ನು ಬದಿಗಿಟ್ಟು, ರೈತರ ಹಿತ ಕಾಯುವ ಮೂಲಕ ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಇಲ್ಲವಾದರೆ ಜನ ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.