ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಯಾರೇ ಸ್ಪರ್ಧಿಸಿದರೂ ಸ್ವಾಗತಿಸುತ್ತೇವೆ. ಅದಕ್ಕೆ ಹೆದರಿಕೆಯಾಗಲಿ ಅಥವಾ ಆತಂಕವಾಗಲಿ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಪದ್ಮನಾಭನಗರದ ಗೌಡರ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮನಗರದ ಜೆಡಿಎಸ್ ಅಭ್ಯರ್ಥಿ ಆಗಿರುವ ನಿಖಿಲ್ ಕುಮಾರಸ್ವಾಮಿ ರಾಮನಗರಕ್ಕೆ ಹೊಸಬರಲ್ಲ. ಆ ಕ್ಷೇತ್ರದಲ್ಲೇ ಮನೆ ಇದೆ. ಕ್ಷೇತ್ರದಾದ್ಯಂತ ಪಕ್ಷದ ಸಂಘಟನೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಸಂಸದ ಡಿ ಕೆ ಸುರೇಶ್ ಸೇರಿದಂತೆ ಕಾಂಗ್ರೆಸ್ನಿಂದ ಯಾರೇ ಸ್ಪರ್ಧಿಸಿದರೂ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
ಹೆದ್ದಾರಿ ಪೂರ್ಣವಾಗಿಲ್ಲ ಟೋಲ್ ಸಂಗ್ರಹ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡಲು ಮುಂದಾಗಿದ್ದಾರೆ. ರಸ್ತೆ ಕಾಮಗಾರಿ ಪೂರ್ಣವಾಗಿಲ್ಲ. ಆದರೂ ಟೋಲ್ ಸಂಗ್ರಹಿಸುವುದು ಎಷ್ಟು ಸರಿ. ವೈಜ್ಞಾನಿಕವಾಗಿ ಕೂಡ ರಸ್ತೆ ನಿರ್ಮಾಣ ಮಾಡಿಲ್ಲ. ತಜ್ಱರ ಸಮಿತಿ ರಚಿಸಿ ರಸ್ತೆ ಸಮಸ್ಯೆಯನ್ನು ಸರಿಪಡಿಸಿದ ನಂತರ ಟೋಲ್ ಸಂಗ್ರಹಿಸಬಹುದು ಎಂದರು.
ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ನಾನು ಯಾರನ್ನೂ ಕೂಡ ಆಹ್ವಾನಿಸಿಲ್ಲ. ಆ ಬಗ್ಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ದೇವೇಗೌಡರ ಸಮ್ಮುಖದಲ್ಲಿ ಒಬೈದುಲ್ಲಾ ಸೇರ್ಪಡೆ:ಇಂದು ದೇವೇಗೌಡರ ಸಮ್ಮುಖದಲ್ಲಿ ಒಬೈದುಲ್ಲಾ ಅವರು ಸೇರ್ಪಡೆಯಾಗಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು. ಸರ್ವ ಧರ್ಮ ಸಮನ್ವಯ ಮಾಡುವಲ್ಲಿ ಇರುವ ಎತ್ತಿದ ಕೈ. ವಿಪಿ ಸಿಂಗ್, ಜಯಪ್ರಕಾಶ್ ನಾರಾಯಣ್ ಒಡನಾಡಿಯಾಗಿದ್ದರು ಎಂದು ಪ್ರಶಂಸಿಸಿದರು.