ಬೆಂಗಳೂರು :ಇಡೀ ದಿನ ವಕೀಲರ ಜೊತೆ ಚರ್ಚೆ ನಡೆಸುತ್ತಿರುವ ರಮೇಶ್ ಜಾರಕಿಹೊಳಿ, ಎಸ್ಐಟಿಗೆ ಆಡಿಯೋ, ವಿಡಿಯೋ ಸಾಕ್ಷ್ಯಗಳ ಹಸ್ತಾಂತರ ಮತ್ತು ಡಿಕೆಶಿ ವಿರುದ್ಧ ದೂರು ಕೊಡುವ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಕೀಲರ ಸಲಹೆ ಮೇರೆಗೆ ಮುಂದುವರೆಯಲು ನಿರ್ಧಾರ ಮಾಡಿದ್ದು, ಮುಖ್ಯವಾಗಿ ಡಿಕೆಶಿ ವಿರುದ್ಧ ದೂರು ಕೊಡುವ ಬಗ್ಗೆ ವಕೀಲರಿಂದ ಸಲಹೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಓದಿ: ರಮೇಶ್ ಜಾರಕಿಹೊಳಿ ಮನೆ ಬಳಿ ಪ್ರತಿಭಟಿಸಲು ಮುಂದಾದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು
ದೂರು ಕೊಡಬೇಕಾ? ಬೇಡವಾ? ಕೊಡುವುದಾದರೆ ಎಸ್ಐಟಿಗೋ? ಪೊಲೀಸ್ ಠಾಣೆಗೋ?, ಯಾರ ಮೂಲಕ ದೂರು ಕೊಡಬೇಕು?, ಒಂದೊಮ್ಮೆ ದೂರು ಬೇಡ ಅನ್ನೋದಾದರೆ ಮುಂದಿನ ಕಾನೂನು ಹಾದಿ ಏನಿದೆ? ಅನ್ನೋ ಕುರಿತು ಹತ್ತು ಹಲವು ಪ್ರೆಶ್ನೆಗಳನ್ನು ಮುಂದಿಟ್ಟುಕೊಂಡು ವಕೀಲರ ತಂಡದೊಂದಿಗೆ ಸಮಾಲೋಚನೆ ನೆಡೆಸಿರುವುದಾಗಿ ಮಾಹಿತಿ ಹೊರ ಬಿದ್ದಿದೆ.
ಡಿಕೆಶಿ ಹೆಸರು ಪ್ರಸ್ತಾಪ ಹಿನ್ನೆಲೆ ದೂರು ಕೊಡಲು ಉತ್ಸುಕರಾಗಿರುವ ರಮೇಶ್ ಜಾರಕಿಹೊಳಿ, ಅದಕ್ಕೂ ಮೊದಲು ವಕೀಲರ ಸೂಚನೆಯಂತೆ ಮುಂದುವರೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ವಕೀಲರು ದೂರು ಬೇಡ ಅಂದರೆ ರಮೇಶ್ ಸುಮ್ಮನಗಲಿದ್ದಾರಾ..? ಕುತೂಹಲ ಹುಟ್ಟಿಸಿರುವ ರಮೇಶ್ ಜಾರಕಿಹೊಳಿ ನಡೆಯನ್ನು ಕಾದು ನೋಡಬೇಕಿದೆ.
ಇಂದು ರಮೇಶ್ ದೂರು ಕೊಡುತ್ತಾರೋ ಇಲ್ಲವೋ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಈ ಕ್ಷಣದವರೆಗೆ ರಮೇಶ್ ನಡೆ ಸ್ಪಷ್ಟವಾಗಿಲ್ಲ. ದೂರು ನೀಡುತ್ತೇನೆ ಎಂದು ನಿನ್ನೆ ರಾತ್ರಿ ಹೇಳಿಕೆ ನೀಡಿದ್ದ ರಮೇಶ್ ಜಾರಕಿಹೊಳಿ, ಇಡೀ ದಿನ ಸದಾಶಿವನಗರದ ತಮ್ಮ ನಿವಾಸದಲ್ಲಿದ್ದಾರೆ ಎನ್ನಲಾಗಿದೆ.
ದೂರು ಸಂಬಂಧ ವಕೀಲರ ಜೊತೆ ಚರ್ಚೆ ನಡೆಸುತ್ತಿರುವ ರಮೇಶ್, ಡಿಕೆಶಿ ವಿರುದ್ಧ ದೂರು ನೀಡುವ ಬಗ್ಗೆ ರಮೇಶ್ ಜಾರಕಿಹೊಳಿಗೆ ಸಂಜೆಯಾದರೂ ಇನ್ನೂ ಗೊಂದಲ ನಿವಾರಣೆಯಾಗಿಲ್ಲ. ಪೋಷಕರ ಹೇಳಿಕೆ ಆಧರಿಸಿ ಡಿಕೆಶಿಗೆ ನೋಟಿಸ್ ಕೊಡುತ್ತಾರೆಯೋ ಇಲ್ವೋ ಅನ್ನೋದನ್ನ ಕಾದುನೋಡೋಣ ಎಂದು ಈಗಾಗಲೇ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಆದರೆ, ಎಸ್ಐಟಿಗೆ ಏಕಾಏಕಿ ನೋಟಿಸ್ ನೀಡಲು ಸಾಧ್ಯವಿಲ್ಲ. ಆಡಿಯೋ ಅಸಲಿಯೋ ನಕಲಿಯೋ ಅನ್ನೋದು ಇನ್ನೂ ವರದಿ ಬಂದಿಲ್ಲ. ಏಕಾಏಕಿ ಪೋಷಕರ ಹೇಳಿಕೆಯ ಮೇಲೆಯೇ ಡಿಕೆಶಿಗೆ ನೋಟಿಸ್ ನೀಡಲು ಬರುವುದಿಲ್ಲ ಎಂದು ಕಾನೂನು ತಜ್ಞರು ಮನವರಿಕೆ ಮಾಡುತ್ತಿದ್ದಾರೆ.
ಹಾಗಾಗಿ, ಈ ಪ್ರಕ್ರಿಯೆ ಇನ್ನೂ ಒಂದಷ್ಟು ದಿನ ನಡೆಯುತ್ತೆ ಎನ್ನಲಾಗಿದೆ. ಈ ನಡುವೆ ರಮೇಶ್ ಜಾರಕಿಹೊಳಿ ನೇರವಾಗಿ ಡಿಕೆಶಿ ಮೇಲೆ ದೂರು ಕೊಟ್ಟರೆ ಮಾತ್ರ ಎಸ್ಐಟಿ ನೋಟಿಸ್ ನೀಡಬಹುದು. ಈ ಹಿನ್ನೆಲೆ ವಕೀಲರ ಜೊತೆ ರಮೇಶ್ ಜಾರಕಿಹೊಳಿ ಸುದೀರ್ಘ ಚರ್ಚೆ ಮಾಡುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ. ಈ ನಡುವೆ ಕನ್ನಡ ಪರ ಸಂಘಟನೆಗಳು, ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರೂ ಮಾಜಿ ಸಚಿವರು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.