ಬೆಂಗಳೂರು: ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಐಟಿ ಅಧಿಕಾರಿಗಳಿಗೆ ಸದ್ಯಕ್ಕೆ ನೋಟಿಸ್ ನೀಡದಿರಲು ತೀರ್ಮಾನಿಸಿದ್ದಾರೆ. ಈಗಾಗಲೇ ರಮೇಶ್ ಕುಟುಂಬದವರು ಐಟಿ ಅಧಿಕಾರಿಗಳ ಕಿರುಕುಳದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.
ಐಟಿ ಅಧಿಕಾರಿಗಳಿಗೆ ನೋಟಿಸ್ ನೀಡುವ ಮೊದಲು ಪ್ರಾಥಮಿಕ ತನಿಖೆ ನಡೆಸಿ ರಮೇಶ್ ಕುಟುಂಬಸ್ಥರು ಮಾಡಿರುವ ಆರೋಪ ಸಾಬೀತಾದ್ರೆ ಮಾತ್ರ ಐಟಿ ಅಧಿಕಾರಿಗಳಿಗೆ ನೋಟಿಸ್ ನೀಡಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಹೇಳಲಾಗ್ತಿದೆ.
ಸದ್ಯ ರಮೇಶ್ ಬರೆದಿರುವ ಡೆತ್ ನೋಟ್ ಬಗ್ಗೆ ಪರೀಶಿಲನೆ ನಡೆಸಲಾಗುತ್ತಿದೆ. ಡೆತ್ ನೋಟ್ ಪ್ರತಿಯನ್ನು ಎಫ್ಎಸ್ಎಲ್ಗೆ ರವಾನಿಸಲಾಗಿದೆ. ಇನ್ನು, ರಮೇಶ್ ನಿವಾಸದಲ್ಲಿರುವ ಸಿಸಿಟಿವಿ ಪರಿಶೀಲಿಸಿ ರಮೇಶ್ ಅವರಿಗೆ ಕೊನೆ ಕ್ಷಣದಲ್ಲಿ ಬಂದಿರುವ ಫೋನ್ ಕಾಲ್ಗಳ ಕುರಿತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಕುಟುಂಬಸ್ಥರು ಆರೋಪ ಮಾಡಿದ ತಕ್ಷಣ ನೋಟಿಸ್ ನೀಡುವ ಅವಶ್ಯಕತೆ ಇಲ್ಲ. ಪೊಲೀಸರು ಮೊದಲು ಪ್ರಾಥಮಿಕ ತನಿಖೆ ನಡೆಸಿ ನಂತರ ಐಟಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವ ಬಗ್ಗೆ ಚಿಂತಿಸಿದ್ದಾರೆಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.