ಬೆಂಗಳೂರು:ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ. ಅಪೇಕ್ಷಿತರು ಸಾಕಷ್ಟಿದ್ದರೂ ತಳ ಮಟ್ಟದ ಕಾರ್ಯಕರ್ತರಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದು ಮಾಜಿ ಸಂಸದ ಹಾಗೂ ರಾಜ್ಯಸಭೆ ಟಿಕೆಟ್ ಆಕಾಂಕ್ಷಿ ಆಗಿದ್ದ ರಮೇಶ್ ಕತ್ತಿ ಹೇಳಿದ್ದಾರೆ.
ವರಿಷ್ಠರ ತೀರ್ಮಾನಕ್ಕೆ ಬದ್ಧವೆಂದ ರಮೇಶ್ ಕತ್ತಿ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಳ ಮಟ್ಟದವರಿಗೆ ಹೆಚ್ಚಿನ ಮಹತ್ವ ಇದೆ ಅನ್ನೋದನ್ನು ಪಕ್ಷದ ಹೈಕಮಾಂಡ್ ತೋರಿಸಿಕೊಟ್ಟಿದ್ದಾರೆ. ಈರಣ್ಣ ಕಡಾಡಿ, ಅಶೋಕ್ ಗಸ್ತಿ ಉತ್ತಮ ಕಾರ್ಯಕರ್ತರು. ಇಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಇಬ್ಬರು ಅಭ್ಯರ್ಥಿಗಳು ರಾಜ್ಯದ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿ. ಆದರೆ ವರಿಷ್ಠರ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು. ಹಿಂದೆ ಲೋಕಸಭೆ ಟಿಕೆಟ್ ನೀಡುವ ಭರವಸೆಯನ್ನು ಸಿಎಂ ಯಡಿಯೂರಪ್ಪ ನೀಡಿದ್ದರು. ಆದ್ರೆ ಬೇರೆಯವರಿಗೆ ಟಿಕೆಟ್ ಸಿಕ್ಕಿದೆ. ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದು ರಮೇಶ್ ಕತ್ತಿ ತಿಳಿಸಿದರು.
ಲಾಕ್ಡೌನ್ ಮುಗಿಯುವವರೆಗೂ ಯಾರು ಬಯಸಿದರೂ ರೊಟ್ಟಿ ಊಟ ಆಯೋಜಿಸುತ್ತೇವೆ. ಯಾರು ಬೇಕಾದರೂ ಬರಲಿ ಎಂದು ತಮ್ಮ ಊಟದ ಸಭೆಯ ಕುರಿತು ಪ್ರತಿಕ್ರಿಯೆ ನೀಡಿದರು. ಉಮೇಶ್ ಕತ್ತಿ ಅವರಿಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ. ಸಿಗಲಿ, ಬಿಡಲಿ ಜನಸೇವೆ ಮಾಡಿಕೊಂಡು ಹೋಗುತ್ತೇವೆ. ಸೇವೆ ನಮ್ಮ ಜೀನ್ಸ್ನಲ್ಲೇ ಇದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಇಬ್ಬರೂ ಹಿರಿಯರು. ಅವರ ಬಗ್ಗೆ ಮಾತನಾಡುವ ಶಕ್ತಿ ನನಗಿಲ್ಲ, ಮಾತನಾಡಲ್ಲ ಎಂದು ರಮೇಶ್ ಕತ್ತಿ ಇದೇ ವೇಳೆ ಸ್ಪಷ್ಟಪಡಿಸಿದರು.