ಬೆಂಗಳೂರು:ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇಂದು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಇದೇ ವೇಳೆ ರಮೇಶ್ ಜಾರಕಿಹೊಳಿ ಅವರ ಕಾಲೆಳೆದ ಸಿದ್ದರಾಮಯ್ಯ, 'ಏನಪ್ಪಾ ರಮೇಶ ಬಾ ಅಂದಾಗ ಬರಲಿಲ್ಲ. ಈಗ ಬಂದಿದ್ದೀಯಲ್ಲಪ್ಪ ಬಾ' ಎಂದು ನಗುತ್ತಲೇ ಕಾಲೆಳೆದಾಗ, ' ನೀವು ನಮ್ಮ ನಾಯಕರು, ನಿಮ್ಮ ಆರೋಗ್ಯ ಮುಖ್ಯ ನಮಗೆ ಅದಕ್ಕೆ ಬಂದೆ ' ಎಂದಿದ್ದಾರೆ.
ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ರಮೇಶ್ ಜಾರಕಿಹೊಳಿ ಸುಮಾರು ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿ ಆಸ್ಪತ್ರೆಯಿಂದ ಹೊರಬಂದ ರಮೇಶ್ ಜಾರಕಿಹೊಳಿ ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ನಮ್ಮ ನಾಯಕರು. ಅವರು ಈಗ ಆರೋಗ್ಯವಾಗಿದ್ದಾರೆ. ಅವರು ನಾಳೆ ಡಿಸ್ಚಾರ್ಜ್ ಆಗುತ್ತಾರೆ. ನಾನು ಗೆದ್ದಾಗಲೂ ಅವರೇ ನಮ್ಮ ನಾಯಕರು ಎಂದು ಡಿಕ್ಲೇರ್ ಮಾಡಿದ್ದೆ. ಪಕ್ಷ ಬದಲಾವಣೆ ಮಾಡಿದರೂ ಅವರೇ ನಮ್ಮ ಗುರುಗಳು. ಆಸ್ಪತ್ರೆಯಲ್ಲಿ ನಾವಿಬ್ಬರು ಏನೇನ್ ಮಾತನಾಡಿದ್ದೀವಿ ಎಂದು ಹೇಳುವುದಕ್ಕೆ ಆಗಲ್ಲ ಎಂದರು.
ಆಸ್ಪತ್ರೆಗೆ ಗಣ್ಯರ ದಂಡು :
ಸಿದ್ದರಾಮಯ್ಯ ಭೇಟಿಗೆ ಗಣ್ಯರ ದಂಡೇ ಆಗಮಿಸುತ್ತಿದೆ. ನೂತನ ಬಿಜೆಪಿ ಶಾಸಕ ಬಿ.ಸಿ. ಪಾಟೀಲ್, ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ವಿನಯಕುಮಾರ್ ಸೊರಕೆ, ಕೆ.ಸಿ. ಕೊಂಡಯ್ಯ, ಆರ್.ಬಿ. ತಿಮ್ಮಾಪುರ, ಆರ್. ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಬಿ.ಸಿ ಪಾಟೀಲ್ ಮಾತು:
ನಾವು ಪಕ್ಷ ಬದಲಾಯಿಸಿದ್ದೇವೆ, ಆದರೆ ಮಾನವೀಯತೆಯನ್ನು, ಮನುಷ್ಯತ್ವವನ್ನು ಮರೆಯೋಕಾಗಲ್ಲ. ರಾಜಕೀಯವೇ ಬೇರೆ, ಸಂಬಂಧಗಳೇ ಬೇರೆ. ಹೀಗಾಗಿ ನಮ್ಮ ಮಾಜಿ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೇನೆ. ಯಾವುದೇ ರಾಜಕೀಯ ಮಾತಾಡೋಕಾಗಿಲ್ಲ ಎಂದು ಹೇಳಿದರು.
ಅನರ್ಹ ಶಾಸಕ ಆರ್. ಶಂಕರ್ ಮಾತನಾಡಿ, ಸಿದ್ದರಾಮಯ್ಯ ನವರು ಆರೋಗ್ಯವಾಗಿದ್ದಾರೆ ಎಂದರು. ಹಾಗೆಯೇ ಸಂಪುಟ ವಿಸ್ತರಣೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತಮಗೆ ಮಂತ್ರಿ ಸ್ಥಾನ ಕೊಡುವುದಾಗಿ ಬಿಎಸ್ ವೈ ಮಾತು ಕೊಟ್ಟಿದ್ದಾರೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ನಾನು ಮಂತ್ರಿ ಹಾಗೆ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶೂನ್ಯಮಾಸ ಇರುವುದರಿಂದ ಇನ್ನೂ ಒಂದುವಾರ ತಡವಾಗಬಹುದು. ಹೈಕಮಾಂಡ್ ನಾಯಕರನ್ನು ಸಿಎಂ ಯಡಿಯೂರಪ್ಪ ಭೇಟಿ ಮಾಡಲಿದ್ದಾರೆ. ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿದರು.