ಬೆಂಗಳೂರು:ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಎಸ್ಐಟಿ ತನಿಖಾ ಪ್ರಕ್ರಿಯೆ ಬಗ್ಗೆ ಅಸಮಾಧಾನ ಹೊರಹಾಕಿದ್ದ ಯುವತಿ ಹೇಳಿಕೆ ಬಗ್ಗೆ ಎಸ್ಐಟಿ ತಲೆಯೇ ಕೆಡಿಸಿಕೊಂಡಿಲ್ಲ.
ಸಂತ್ರಸ್ತೆ ಎನ್ನಲಾಗುತ್ತಿರುವ ಯುವತಿ ಆರೋಪವೇ ನಿರಾಧಾರವಾಗಿದೆ. ಕೃತ್ಯ ಎಸಗಲು ಪೂರ್ವ ನಿಯೋಜಿತವಾಗಿ ಸಿಡಿ ಗ್ಯಾಂಗ್ ಏನೆಲ್ಲಾ ಮಾಡಿತ್ತು ಎಂಬುದರ ಬಗ್ಗೆ ಪ್ರತ್ಯಕ್ಷ ಸಾಕ್ಷಿ ಸಮೇತ ಸಿಆರ್ಪಿಸಿ 164 ರಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ತನಿಖೆ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಸಿಡಿ ಬಹಿರಂಗವಾಗುತ್ತಿದ್ದಂತೆ ಶಂಕಿತರು ಏನೆಲ್ಲಾ ಪ್ಲ್ಯಾನ್ ಮಾಡಿದ್ದರು? ಎಲ್ಲೆಲ್ಲಿ ಓಡಾಡಿದ್ದಾರೆ? ಯಾರೆಲ್ಲಾ ತಮ್ಮನ್ನು ಭೇಟಿಯಾಗಿ ಏನೆಲ್ಲಾ ಖರೀದಿ ಮಾಡಿದ್ದರು ಎಂಬುದರ ಬಗ್ಗೆ ಐವರು ಪ್ರತ್ಯಕ್ಷವಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.
ಸಾಕ್ಷಿ ನಂ 1: ಆಕಾಶ್
ಸಂತ್ರಸ್ತೆ ಎನ್ನಲಾಗುತ್ತಿರುವ ಯುವತಿಯ ಸ್ನೇಹಿತ ಬೀದರ್ನ ಭಾಲ್ಕಿ ಮೂಲದ ಆಕಾಶ್ ಸಿಡಿ ಬಹಿರಂಗವಾಗುತ್ತಿದ್ದಂತೆ ಶಂಕಿತರ ನೆರವಿನಿಂದ ಯುವತಿಯೊಂದಿಗೆ ಗೋವಾಕ್ಕೆ ತೆರಳಿದ್ದ. ಗೋವಾಕ್ಕೆ ತೆರಳುವರೆಗೂ ಸಿಡಿ ವಿಚಾರ ಆಕಾಶ್ಗೆ ಗೊತ್ತಿರಲಿಲ್ಲ. ಸಿಡಿ ವಿಡಿಯೋ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಯುವತಿ ವಿರುದ್ಧ ಕಿಡಿಕಾರಿ ಗೋವಾದಿಂದ ಬೆಂಗಳೂರಿಗೆ ಆಕಾಶ್ ವಾಪಸ್ ಆಗಿದ್ದ. ಇದಕ್ಕೂ ಮುನ್ನ ಶಂಕಿತರಾದ ನರೇಶ್ ಗೌಡ ಹಾಗೂ ಶ್ರವಣ್ ಗೋವಾಕ್ಕೆ ಕಾರಿನಲ್ಲಿ ತೆರಳಿರುವುದಾಗಿ ಎಸ್ಐಟಿ ಮುಂದೆ ಆಕಾಶ್ ಹೇಳಿಕೆ ನೀಡಿದ್ದಾನೆ.
ಸಾಕ್ಷಿ ನಂ 2 :- ಸವಿತಾ
ಗೋವಾದ ಹೊಟೇಲ್ವೊಂದರ ಮಾಲೀಕರಾದ ಸವಿತಾ, ಯುವತಿ ಹಾಗೂ ಆಕೆಯ ಸ್ನೇಹಿತ ಆಕಾಶ್ಗೆ ಗೋವಾದಲ್ಲಿ ಆಶ್ರಯ ನೀಡಿದ್ದಳು. ಸವಿತಾಗೆ ಕೆಲಸ ವಹಿಸಿದ್ದು ಶಂಕಿತ ಆರೋಪಿ ನರೇಶ್ ಆಪ್ತ ಉದ್ಯಮಿ ಶಿವಕುಮಾರ್. ಉದ್ಯಮಿ ಶಿವಕುಮಾರ್ ಸವಿತಾಗೆ ಆಪ್ತನಾಗಿದ್ದು, ಈತನೇ ರೂಂ ಬುಕ್ ಮಾಡಲು ಹೇಳಿದ್ದ ಎಂದು ವಿಚಾರಣೆ ವೇಳೆ ಆಕೆ ತಿಳಿಸಿದ್ದಾಳೆ. ಸದ್ಯ ಶಿವಕುಮಾರ್ ಸಹ ಎಸ್ಐಟಿ ಕೈಗೆ ಸಿಗದೇ ನಾಪತ್ತೆಯಾಗಿದ್ದಾನೆ.
ಸಾಕ್ಷಿ ನಂ 3 :- ಮೋಹನ್
ದೇವನಹಳ್ಳಿ ಬಳಿಯ ವಿಜಯಪುರದ ನಿವಾಸಿ ಮೋಹನ್ ಶಂಕಿತ ಆರೋಪಿ ಶ್ರವಣ್ನಿಂದ ಹಣ ಪಡೆದು ಆತನ ಸಹೋದರ ಚೇತನ್ಗೆ ಹಣ ನೀಡಿದ್ದ. ಬ್ಲ್ಯಾಕ್ ಮನಿಯನ್ನು ವೈಟ್ ಮನಿಯಾಗಿ ಚೇತನ್ಗೆ ನೀಡಿದ್ದ. ಶ್ರವಣ್ ಕೂಡ ಹಣ ನೀಡಿರುವುದಾಗಿ ಹೇಳಿಕೆ ಕೊಟ್ಟಿದ್ದಾನೆ.
ಸಾಕ್ಷಿ ನಂ 4 :- ಖಾಸಗಿ ಟ್ರಾವೆಲ್ಸ್ ಮಾಲಿಕ
ಯುವತಿ ಹಾಗೂ ಆಕಾಶ್ರನ್ನು ಖಾಸಗಿ ಬಸ್ನಲ್ಲಿ ಗೋವಾಗೆ ಕಳಿಸಿದ್ದ ನರೇಶ್. ಇದಕ್ಕಾಗಿ ಚರ್ಚ್ ಸ್ಟ್ರೀಟ್ ಬಳಿಯ ಖಾಸಗಿ ಟ್ರಾವೆಲ್ಸ್ ಒಂದರಲ್ಲಿ ಟಿಕೆಟ್ ಬುಕ್ ಮಾಡಿದ್ದ. ಟ್ರಾವೆಲ್ಸ್ಗೆ ನರೇಶ್ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ನರೇಶ್ ಖುದ್ದು ನೇರವಾಗಿ ಕಚೇರಿಗೆ ಬಂದು ಗೋವಾಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿರುವುದಾಗಿ ಖಾಸಗಿ ಟ್ರಾವೆಲ್ಸ್ ಮಾಲಿಕನ ಹೇಳಿಕೆಯನ್ನು ಎಸ್ಐಟಿ ದಾಖಲಿಸಿಕೊಂಡಿದೆ.
ಸಾಕ್ಷಿ ನಂ 5 :- ಇಲೆಕ್ಟ್ರಾನಿಕ್ಸ್ ಅಂಗಡಿ ಮಾಲಿಕ
ಎಸ್.ಪಿ. ರಸ್ತೆಯ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕನ ಹೇಳಿಕೆ ಸಹ ಎಸ್ಐಟಿ ದಾಖಲಿಸಿಕೊಂಡಿದೆ. ಫೆಬ್ರವರಿಯಲ್ಲಿ ಶಂಕಿತ ಶ್ರವಣ್ ಖುದ್ದು ಹಾಜರಾಗಿ 1 ಲಕ್ಷಕ್ಕೂ ಅಧಿಕ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣ ಖರೀದಿಸಿರುವುದರ ಬಗ್ಗೆ ಅಂಗಡಿ ಮಾಲೀಕ ಹೇಳಿಕೆ ನೀಡಿದ್ದಾನೆ.