ಬೆಂಗಳೂರು :ನಿರೀಕ್ಷೆಯಂತೆ ಪರಿಷತ್ ಕಲಾಪದಲ್ಲಿ ಸಿಡಿ ಪ್ರಕರಣವನ್ನು ಕಾಂಗ್ರೆಸ್ ಪ್ರಸ್ತಾಪ ಮಾಡಿದೆ. ಪ್ರತಿಪಕ್ಷದ ನಿಲುವಳಿ ಸೂಚನೆಯನ್ನು ನಿಯಮ 68ರ ಅಡಿ ಚರ್ಚೆಗೆ ಅವಕಾಶ ಕಲ್ಪಿಸಿ ಸಮಯ ನಿಗದಿಪಡಿಸಲಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.
ವಿಧಾನ ಪರಿಷತ್ನ ಶೂನ್ಯ ವೇಳೆ ನಂತರ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅವರು ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ನಿಲುವಳಿ ಸೂಚನೆ ಮಂಡಿಸಿದರು. 6 ಸಚಿವರು ಕೋರ್ಟ್ ಮೊರೆ ಹೋಗಿ ತಮ್ಮ ವಿರುದ್ಧ ಮಾನಹಾನಿಕರ ವಿಷಯ ಬಿತ್ತರಿಸಬಾರದೆಂದು ನಿರ್ಬಂಧಕಾಜ್ಞೆ ತಂದಿದ್ದಾರೆ. ಇದರಿಂದ ರಾಜ್ಯದ ಮರ್ಯಾದೆ ಹರಾಜಾಗಿದೆ ಎಂದು ಆರೋಪಿಸಿದರು.
ಸಿಡಿ ವಿಷಯ ಕುರಿತು ಯಾರೊಬ್ಬರೂ ದೂರು ಕೊಡುವ ಮೊದಲೇ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ನೀಡಿದ ದೂರು, ಸಂತ್ರಸ್ತೆ ಪೋಷಕರು ನೀಡಿದ ದೂರಿನಂತೆ ತನಿಖೆ ನಡೆಯುತ್ತಿರುವುದು ಅನುಮಾನವಾಗಿದೆ. ಮಹಿಳಾ ಆಯೋಗ ಸಂತ್ರಸ್ತೆಗೆ ರಕ್ಷಣೆ ನೀಡಿವಂತೆ ಸೂಚಿಸಿದ್ದರೂ ಈವರೆಗೂ ಸಂತ್ರಸ್ತೆ ಪತ್ತೆ ಮಾಡಿಲ್ಲ.
ರಕ್ಷಣೆ ಕೊಡುವ ಕೆಲಸವಾಗಿಲ್ಲ. ಎಸ್ಐಟಿ ತನಿಖೆ ನೋಡಿದರೆ ಸಿಡಿ ವಿಷಯದಲ್ಲಿ ತನಿಖೆ ಬೇರೆ ಹಾದಿಯಲ್ಲಿದೆ ಎನಿಸಲಿದೆ. ಪ್ರಕರಣ ರಾಜ್ಯದ ಘನತೆಗೆ ಕುಂದು ತರುವಂತಿದೆ. ನಿಯಮ 59ರ ಅಡಿ ಚರ್ಚೆಗೆ ಅವಕಾಶ ಕೊಡುವಂತೆ ಮನವಿ ಮಾಡಿದರು.
ಪ್ರತಿಪಕ್ಷದ ನಿಲುವಳಿ ಸೂಚನೆಗೆ ಸಚಿವ ನಾರಾಯಣಗೌಡ ಆಕ್ಷೇಪಿಸಿದರು. ಈ ಹಿಂದೆ ಯಾರೂ ಕೋರ್ಟ್ಗೆ ಹೋಗಿಲ್ಲವೇ? ಎಂದು ಪ್ರತಿಪಕ್ಷವನ್ನು ಪ್ರಶ್ನಿಸಿದರು. ನಮ್ಮ ಗೌರವಕ್ಕೆ ಚ್ಯುತಿ ಬಂದಿದೆ.
ಹಾಗಾಗಿ, ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಅಷ್ಟೇ ಎಂದು ಎಸ್ ಆರ್ ಪಾಟೀಲ್ ವಿರುದ್ಧ ಹರಿಹಾಯ್ದರಲ್ಲದೇ, ನ್ಯಾಯಾಲಯದ ಮೊರೆ ಹೋಗಿದ್ದನ್ನು ಸಮರ್ಥಿಸಿಕೊಂಡರು. ನಂತರ ಸಭಾಪತಿ ಬಸವರಾಜ ಹೊರಟ್ಟಿ ಕಾಂಗ್ರೆಸ್ನ ನಿಲುವಳಿ ಸೂಚನೆಯನ್ನು ನಿಯಮ 68ಕ್ಕೆ ಪರಿವರ್ತನೆ ಮಾಡಿ ಸಮಯ ನಿಗದಿಪಡಿಸುವುದಾಗಿ ರೂಲಿಂಗ್ ನೀಡಿದರು.
ರೂಲಿಂಗ್ ಮರು ಪರಿಶೀಲಿಸಿ :ಸಭಾಪತಿ ರೂಲಿಂಗ್ ನೀಡಿದ ನಂತರ ನಿರ್ಧಾರ ಪುನರ್ ಪರಿಶೀಲಿಸುವಂತೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದರು. ಕಾಂಗ್ರೆಸ್ ತಂದಿರುವ ನಿಲುವಳಿ ನಿಯಮ 59ರ ಅಡಿ ಬರಲ್ಲ. ನ್ಯಾಯಾಲಯದಲ್ಲಿ ಬಾಕಿ ಇರುವುದನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ನಿಯಮ 59 ಹೇಳಿದೆ.
ಹಾಗಾಗಿ, ಆದೇಶ ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದರು. ಸಭಾ ನಾಯಕರ ಪ್ರಸ್ತಾವನೆಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಚರ್ಚೆಗೆ ಅವಕಾಶ ನೀಡುವುದಾಗಿ ರೂಲಿಂಗ್ ನೀಡಲಾಗಿದೆ. ಈಗ ಮತ್ತೆ ಅದನ್ನು ಬದಲಿಸಬಾರದು ಎಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮನವಿ ಮಾಡಿದರು.
ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಸಿಡಿ ವಿಷಯ ಚರ್ಚೆಗೆ ಅವಕಾಶ ನೀಡುವುದಾಗಿ ರೂಲಿಂಗ್ ನೀಡಿದ್ದೀರಿ. ಆದರೆ, ಯಾವಾಗ ಅವಕಾಶ ಕೊಡುತ್ತೀರಿ ಎಂದು ಹೇಳಬೇಕು ಎಂದರು. ಪರಿಶೀಲಿಸಿ ಸಮಯ ನಿಗದಿಪಡಿಸುವ ಸಭಾಪತಿಗಳ ಭರವಸೆಗೆ ಒಪ್ಪದೆ ಈಗಲೇ ಸಮಯ ಹೇಳಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಏರಿದ ದನಿಯಲ್ಲೇ ಸಭಾಪತಿಗಳು ಅದು ನನ್ನ ಕೆಲಸ, ನಾನು ಸಮಯ ನಿಗದಿಪಡಿಸುತ್ತೇನೆ ಎಂದರು.
ಓದಿ:ಸದನ ಸಮಿತಿಗೆ ಜೆಡಿಎಸ್ ಪಟ್ಟು, ನರ್ಸಿಂಗ್ ಕಾಲೇಜು ಪರವಾನಗಿ ವಿಷಯದ ಗದ್ದಲಕ್ಕೆ ಕಲಾಪ ಬಲಿ