ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿರುವ ದೂರು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಆಧರಿಸಿ ಯಾವುದರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂಬ ಗೊಂದಲ ಪೊಲೀಸರಲ್ಲಿ ಮೂಡಿದೆಯಂತೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರಂತೆ.
ಸಂತ್ರಸ್ತೆ ಕುಟುಂಬಸ್ಥರು ಅಥವಾ ಸಂಬಂಧಿಗಳು ದೂರು ನೀಡದೇ ಹೋದರೆ ಕಾನೂನಾತ್ಮಕವಾಗಿ ಪ್ರಕರಣಕ್ಕೆ ಮಾನ್ಯತೆ ಸಿಗುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ ಪೊಲೀಸರಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಎಫ್ಐಆರ್ ದಾಖಲಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಲಾಗಿದೆ.
ದಿನೇಶ್ ನೀಡಿದ ದೂರು ಮಾನ್ಯವಾಗುತ್ತಾ?: ಸಂತ್ರಸ್ತೆ ಕುಟುಂಬಸ್ಥರು ಸಿಡಿ ನೀಡಿ ದೂರು ನೀಡುವಂತೆ ಮನವಿ ಮಾಡಿರುವುದಾಗಿ ದಿನೇಶ್ ದೂರಿನಲ್ಲಿ ಉಲ್ಲೇಖಿಸದ್ದಾರೆ. ಈ ಮಾಹಿತಿ ಆಧರಿಸಿ ನೀಡಿರುವ ದೂರನ್ನು ಮಾನ್ಯ ಮಾಡುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ ಎನ್ನಲಾಗಿದೆ. ಒಂದು ವೇಳೆ, ದೂರು ದಾಖಲಿಸಿಕೊಂಡರೆ ಸಚಿವರ ವಿರುದ್ಧ ವಂಚನೆ ಹಾಗೂ ಜೀವ ಬೆದರಿಕೆ ಅಡಿ ಪ್ರಕರಣ ದಾಖಲಿಸಬಹುದು. ಮುಂದಿನ ದಿನಗಳಲ್ಲಿ ವಿಚಾರಣೆ ವೇಳೆ ಸಂತ್ರಸ್ತೆಯು ಆಮಿಷವೊಡ್ಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಹೇಳಿಕೆ ನೀಡಿದರೆ ಕಾನೂನು ಸಮಸ್ಯೆ ಎದುರಾಗುವುದಿಲ್ಲ. ಆದರೆ, ಒಂದು ವೇಳೆ ನಮ್ಮಿಬ್ಬರ ನಡುವೆ ಸಮ್ಮತಿ ಇತ್ತು ಎಂದು ಹೇಳಿಕೆ ನೀಡಿದರೆ ಪೊಲೀಸರಿಗೆ ಕಂಟಕ ಎದುರಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಯಾರ ಮಾತೂ ಕೇಳುವ ಸ್ಟೇಜ್‌ನಲ್ಲಿಲ್ಲ: ಸಹೋದರ ಸತೀಶ್ ಜಾರಕಿಹೊಳಿ
ಸ್ವಯಂ ಪ್ರೇರಿತ ಪ್ರಕರಣ ದಾಖಲು?:ಇದಲ್ಲದೇ ದಿನೇಶ್ ಕಲ್ಲಹಳ್ಳಿ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲು ತನಿಖಾಧಿಕಾರಿಗಳು ಕಾನೂನು ತಜ್ಞರ ಅಭಿಪ್ರಾಯ ಪಡೆದಿದ್ದಾರೆ ಎನ್ನಲಾಗಿದೆ. ದಿನೇಶ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮಹಿಳಾ ಘನತೆಗೆ ಧಕ್ಕೆಯಡಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ನಂತರ ಸಂತ್ರಸ್ತೆ ನೀಡುವ ಹೇಳಿಕೆ ಆಧರಿಸಿ ಮುಂದಿನ ಪ್ರಕರಣ ದಾಖಲಿಸುವ ಬಗ್ಗೆ ಕಾನೂನು ತಜ್ಞರು ಪೊಲೀಸರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.