ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಗಳೂರು:ರಮೇಶ್ ಜಾರಕಿಹೊಳಿ ಆರೋಪಗಳೆಲ್ಲ ರಬ್ಬಿಷ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಆರೋಪದ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದು, ಸಿಬಿಐ ತನಿಖೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದು 50 ದಿನ:ಬರೆದಿಟ್ಟು ಕೊಳ್ಳಿ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದು ರಾಜ್ಯದಲ್ಲಿ 50 ದಿನ ಮಾತ್ರ. ನಾನು ಎರಡು ಬಾರಿ ಸರ್ವೇ ಮಾಡಿದ್ದೇನೆ. 160 ಸೀಟು ನಮಗೆ ಸಿಗುತ್ತದೆ. 136 ಸೀಟು ಬಂದೇ ಬರುತ್ತೇವೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು. ಪ್ರಜಾಧ್ವನಿ ಯಾತ್ರೆಯನ್ನು ವಿಧಾನಸಭಾ ಕ್ಷೇತ್ರವಾರು ಮಾಡುತ್ತಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಾತ್ರೆಯನ್ನು ಮುಗಿಸಿದ್ದೇವೆ. ನಾವು ಏನು ನೀರೀಕ್ಷೆ ಮಾಡಿದ್ವೋ ಅದರ ಎರಡರಷ್ಟು ಜನ ಸೇರಿದ್ದಾರೆ. ಅಂದ್ರೆ ಜನರ ಸಮಸ್ಯೆ ಇತ್ತಿಚೀಗೆ ದುಪ್ಪಟ್ಟಾಗಿದೆ. ಹಾಸನ ಮಂಡ್ಯದಲ್ಲಿ ಒಬ್ಬರೇ ಒಬ್ಬರು ನಮ್ಮ ಶಾಸಕರಿಲ್ಲ. ಆದರೂ ಅಲ್ಲಿ ಜನ ಸೇರಿದ್ದು ನೋಡಿ ನನಗೆ ಅಶ್ಚರ್ಯವಾಗಿದೆ ಎಂದರು.
ಸುಳ್ಳು ಅಶ್ವಾಸನೆ ಕೊಡುವುದಿಲ್ಲ: ಶಾಸಕರು ಇಲ್ಲದೇ ಇರುವ ಜಿಲ್ಲೆಯಲ್ಲಿ ಇಷ್ಟು ಜನ ಸೇರಿದ್ದು ದಾಖಲೆ. ಬಸವಣ್ಣನವರ ಕರ್ಮ ಭೂಮಿಯಿಂದ ಸಿದ್ಧರಾಮಯ್ಯ ಅವರು ಹೊರಡುತ್ತಿದ್ದಾರೆ. ಸರ್ಕಾರ ಭ್ರಷ್ಟಚಾರದಲ್ಲೇ ಮುಳುಗಿ ಹೋಗಿದೆ. ಈ ಯಾತ್ರೆ ಜನರ ಸಮಸ್ಯೆಗಳನ್ನ ತಿಳಿಯಲು ಆಗಿದೆ. ನಾವು ಸುಳ್ಳು ಅಶ್ವಾಸನೆ ಕೊಡುವುದಿಲ್ಲ ಎಂದು ತಿಳಿಸಿದರು.
ಪರಮೇಶ್ವರ್ ನಮ್ಮ ಪಕ್ಷದ ಆಸ್ತಿ: ಪ್ರಣಾಳಿಕೆ ವಿಚಾರದಲ್ಲಿ ಪರಮೇಶ್ವರ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪರಮೇಶ್ವರ್ ನಮ್ಮ ಪಕ್ಷದ ಆಸ್ತಿ. ಅವರು ಬಹಳ ಸುದೀರ್ಘವಾಗಿ ಪಕ್ಷ ಕಟ್ಟಿದವರು ಎಂದು ತಿಳಿಸಿದರು.
ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್:ಬೆಂಗಳೂರಿಗೆ ಒಂದು ವಿಶೇಷವಾದ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ತರಬೇಕಿದೆ. ಬೆಂಗಳೂರು ಟ್ರಾಫಿಕ್ ಮ್ಯಾನ್ಮೆಂಜ್ಮೆಂಟ್ಗೆ ಸಂಬಂಧಿಸಿ ಸುರ್ಜೆವಾಲಾ ಚರ್ಚೆ ಮಾಡಿದ್ದಾರೆ. ಸಿಂಗಾಪುರಕ್ಕೆ ಒಂದು ಟೀಂ ಕಳಿಸಲು ನಿರ್ಧಾರ ಮಾಡಿದ್ದೇವೆ. ಪರಮೇಶ್ವರ್ ನೇತೃತ್ವದಲ್ಲಿ ಒಂದು ತಂಡ ಸಿಂಗಾಪುರಕ್ಕೆ ಹೋಗಲಿದೆ. ಅದರ ಬಗ್ಗೆ ಪರಮೇಶ್ವರ್ ಸುರ್ಜೆವಾಲಾ ಚರ್ಚೆ ಮಾಡಿದ್ದಾರೆ. ಬೆಂಗಳೂರಿಗೆ ಬಂದಿರೋ ಕಳಂಕ ತಪ್ಪಿಸುವ ನಿಟ್ಟಿನಲ್ಲಿ ಚರ್ಚೆಯಾಗಿದೆ ಎಂದು ತಿಳಿಸಿದರು.
ಭಿನ್ನಾಭಿಪ್ರಾಯ ಇರಬಹುದು, ಅಸಮಾಧಾನ ಇಲ್ಲ: ತಮ್ಮ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ನಾನು 8 ವರ್ಷ ಸುದೀರ್ಘ ಪಕ್ಷದ ಅಧ್ಯಕ್ಷನಾಗಿದ್ದೇನೆ. ಎರಡು ಪಾರ್ಲಿಮೆಂಟ್ ಎಲೆಕ್ಷನ್ ನಿಭಾಯಿಸಿದ್ದೇನೆ. ಈ ಅನುಭವದ ಆಧಾರದ ಮೇಲೆ ಸುರ್ಜೆವಾಲಾ ಅವರು ಚರ್ಚೆ ಮಾಡಿದ್ದಾರೆ. ಕೆಲವು ಭಿನ್ನಾಭಿಪ್ರಾಯ ಇರಬಹುದು. ಹಾಗಂತ ಅಸಮಾಧಾನ ಅಂತಾ ಅರ್ಥೈಸುವುದು ಸರಿಯಲ್ಲ. ಸುದೀರ್ಘವಾದ ಚರ್ಚೆ ಆಗಿದೆ. ಕೆಲವು ಮಹತ್ವದ ವಿಚಾರಗಳನ್ನು ಸುರ್ಜೆವಾಲಾ ಜತೆಗೆ ಮಾತನಾಡಿದ್ದೇನೆ. ನನ್ನ ಅಭಿಪ್ರಾಯಗಳನ್ನು ಸುರ್ಜೆವಾಲಾ ಎದುರು ಹೇಳಿದ್ದೇನೆ. ಮಹತ್ವದ ಚರ್ಚೆ ಆಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ರಮೇಶ್ ಜಾರಕಿಹೊಳಿ ದೆಹಲಿಗೆ ಪ್ರಯಾಣ:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ 'ಸಿಡಿ'ದೆದ್ದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿನ್ನೆ (ಗುರುವಾರ) ದೆಹಲಿಗೆ ಪ್ರಯಾಣ ಬೆಳೆಸಿದ್ದರು. ತಮ್ಮ ವಿರುದ್ಧ ಬಿಡುಗಡೆಯಾಗಿದ್ದ ಸಿಡಿ ಷಡ್ಯಂತ್ರದ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಆರೋಪ ಮಾಡಿರುವ ಅವರು, ಈ ಬಗ್ಗೆ ತಮ್ಮ ಬಳಿ ಸಾಕ್ಷ್ಯ ಕೂಡ ಇದೆ ಎಂದಿದ್ದಾರೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರದ ಮೇಲೆಯೂ ಒತ್ತಡ ಹೇರುತ್ತಿದ್ದಾರೆ.
ಈ ಬಗ್ಗೆ ಬೊಮ್ಮಾಯಿ ಅವರು ಕೂಡ ನಾವು ನಿಮ್ಮ ಬೆಂಬಲಕ್ಕಿದ್ದೇವೆ, ಸ್ವಲ್ಪ ಸಮಯ ನೀಡಿ ಅಂತ ಅಭಯ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ದೆಹಲಿಗೆ ತೆರಳಿರುವ ಅವರು, ಅಮಿತ್ ಶಾ ಅವರಲ್ಲಿ ಈ ಪ್ರಕರಣವನ್ನು ಆದಷ್ಟು ಬೇಗ ಸಿಬಿಐಗೆ ವರ್ಗಾಯಿಸುವಂತೆ ಮನವಿ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ:ಡಿಕೆಶಿ ವಿರುದ್ಧ 'ಸಿಡಿ'ದೆದ್ದ ರಮೇಶ್ ಜಾರಕಿಹೊಳಿ; ದೆಹಲಿಗೆ ಪ್ರಯಾಣ, ಅಮಿತ್ ಶಾ ಭೇಟಿಗೆ ನಿರ್ಧಾರ