ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಂದು ಅಸಮಾಧಾನಗೊಂಡಿದ್ದ ರಮೇಶ್ ಜಾರಕಿಹೊಳಿ ಅವರನ್ನು ಬೆಂಗಳೂರಿನ ಸದಾಶಿವ ನಗರದ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ಭೇಟಿ ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ, ''ರಮೇಶ್ ಜಾರಕಿಹೊಳಿ ನಡೆ ಹಲವಾರು ರೀತಿಯ ಚರ್ಚೆಗೆ ಗ್ರಾಸವಾಗಿತ್ತು. ಕೆಲವು ಸಂದರ್ಭದಲ್ಲಿ ಅಸಮಾಧಾನ ಕೂಡ ತೋಡಿಕೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷನಾದ ಬಳಿಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ನನ್ನ ಜವಾವ್ದಾರಿ. ಈ ನಿಟ್ಟಿನಲ್ಲಿ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಅವರು ಕೆಲ ವಿಚಾರಗಳನ್ನು ಹಾಗೂ ನೋವುಗಳನ್ನು ತೋಡಿಕೊಂಡಿದ್ದಾರೆ'' ಎಂದು ತಿಳಿಸಿದರು.
''ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ. ನಮ್ಮ ಗುರಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸುವುದು. ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ಒಟ್ಟಿಗೆ ಸೇರಿ ಕೆಲಸ ಮಾಡುತ್ತೇನೆ ಎಂಬ ಭರವಸೆಯನ್ನು ರಮೇಶ್ ಜಾರಕಿಹೊಳಿ ನೀಡಿದ್ದಾರೆ. ಅವರಿಗೆ ಸಮಾಧಾನ ತರುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇನೆ. ಅವರಿಗೆ ಸಮಾಧಾನ ಆಗಿದೆ ಎಂದು ಭಾವಿಸಿದ್ದೇನೆ. ಪಕ್ಷದ ಹಿರಿಯರು ಏನೇ ಹೇಳಿಕೆ ಕೊಟ್ಟರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ'' ಎಂದರು.
''ನಾನು ರಾಜ್ಯಾಧ್ಯಕ್ಷನಾಗಿ ಹೆಚ್ಚು ಮಾತನಾಡುವುದರ ಬದಲಾಗಿ, ಟೀಕೆಗಳನ್ನು ಅಪಾರ್ಥ ಮಾಡಿಕೊಳ್ಳದೇ ಎಲ್ಲರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಕೆಲಸ ಹಾಗೂ ಸಂಘಟನೆಗೆ ಒತ್ತು ಕೊಡುತ್ತೇನೆ. ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕೆಲಸ ಮಾಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ 28 ಬಿಜೆಪಿ ಸಂಸದರನ್ನು ಗೆಲ್ಲಿಸುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯತ್ನಾಳ್ ಭೇಟಿ ಮಾಡದ ವಿಚಾರವಾಗಿ ಪ್ರತಿಕ್ರಿಯಿಸಿ, ''ಅವರ ಅವರ ಅಭಿಪ್ರಾಯಗಳು ಬೇರೆ ಇರುತ್ತೆ. ಆ ಅಭಿಪ್ರಾಯಗಳನ್ನು ತಿಳಿಸುವ ರೀತಿ ಭಿನ್ನವಾಗಿರುತ್ತೆ. ಅದನ್ನು ನಾನು ತಪ್ಪಾಗಿ ಅರ್ಥೈಸಲ್ಲ. ಯಾರೇ ಏನೇ ಹೇಳಿದರು ಅದನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ಮುನ್ನಡೆಯುತ್ತೇನೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನ್ನನ್ನು ವಿರೋಧಿಸಿದರೆ ಮೋದಿಯವರನ್ನು ವಿರೋಧಿಸಿದಂತೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ನನ್ನನ್ನು ಆಯ್ಕೆ ಮಾಡಿರೋದು ಯಡಿಯೂರಪ್ಪನವರಲ್ಲ. ನನ್ನನ್ನು ವರಿಷ್ಠರು, ಎಲ್ಲ ಹಿರಿಯರೂ ಆಯ್ಕೆ ಮಾಡಿದ್ದಾರೆ. ವರಿಷ್ಠರು ತೀರ್ಮಾನ ಮಾಡಿರುವ ಹಿನ್ನೆಲೆಯಲ್ಲಿ ಪಕ್ಷದ, ದೇಶದ ಹಿತದಿಂದ ನಾವೆಲ್ಲರೂ ಒಂದಾಗಿ ಹೋಗಬೇಕು. ಈ ಉದ್ದೇಶದಿಂದ ನಾನು ಹಾಗೆ ಹೇಳಿದ್ದೇನೆ ಅಷ್ಟೇ'' ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಡಿಸೆಂಬರ್ 6ರ ನಂತರ ನನಗಾದ ನೋವು ವಿವರಿಸುತ್ತೇನೆ: ವಿ.ಸೋಮಣ್ಣ