ಬೆಂಗಳೂರು: ರಾಜ್ಯದ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಐದು ಸಾವಿರ ರೂ. ಗೌರವ ಧನ ಹೆಚ್ಚಿಸಲು ಕೂಡಲೇ ಆದೇಶ ಹೊರಡಿಸಬೇಕೆಂದು ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದ ಪದವಿ ಕಾಲೇಜುಗಳಲ್ಲಿ 14,456 ಅತಿಥಿ ಉಪನ್ಯಾಸಕರು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ 3,054 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಪದವಿ ಕಾಲೇಜುಗಳಲ್ಲಿ ಕ್ರಮವಾಗಿ 11,000 ಹಾಗೂ 13,000 ರೂಪಾಯಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 8,000 ರೂಪಾಯಿ ಗೌರವ ಧನವನ್ನು ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿದೆ ಎಂದರು.
ಅತಿಥಿ ಉಪನ್ಯಾಸಕರಿಗೆ ಗೌರವ ಧನ ಹೆಚ್ಚಿಸುವಂತೆ ರಮೇಶ್ ಬಾಬು ಆಗ್ರಹ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಅತಿಥಿ ಉಪನ್ಯಾಸಕರಿಗೆ ಮಾಸಿಕ 5000 ರೂಪಾಯಿಗಳ ಹೆಚ್ಚುವರಿ ಗೌರವ ಧನ ನೀಡಲು ತೀರ್ಮಾನವಾಗಿದ್ದರೂ ಜಾರಿ ಆಗಲಿಲ್ಲ. ತದನಂತರ ಈಗಿನ ಸರ್ಕಾರದಲ್ಲಿ ಐದು ಸಾವಿರ ರೂಪಾಯಿ ಹೆಚ್ಚು ಮಾಡಲು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಡತವನ್ನು ಮಂಡನೆ ಮಾಡಿದ್ದರೂ ಇದುವರೆಗೆ ರಾಜ್ಯ ಸರ್ಕಾರ ಸೂಕ್ತ ಆದೇಶ ಹೊರಡಿಸಿರುವುದಿಲ್ಲ. ಕೂಡಲೇ ಸರ್ಕಾರ ಸೂಕ್ತ ಆದೇಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೋವಿಡ್ ಹಿನ್ನೆಲೆ ಲಾಕ್ ಡೌನ್ ಘೋಷಣೆ ಆದ ಪರಿಣಾಮ ಮಾರ್ಚ್ 22 ರಿಂದ ಪದವಿ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಲ್ಲಿಸಲಾಯಿತು. ನಿಯಮಾನುಸಾರ ಮಾರ್ಚ್ ಪೂರ್ಣ ತಿಂಗಳ ಗೌರವ ಧನವನ್ನು ಅತಿಥಿ ಉಪನ್ಯಾಸಕರಿಗೆ ಪಾವತಿ ಮಾಡಬೇಕಾಗಿತ್ತು. ಈ ಸಂಬಂಧ ಬಜೆಟ್ ಅನುಗುಣವಾಗಿ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಹಣ ಬಿಡುಗಡೆ ಆಗಿರುತ್ತದೆ. ಆದರೆ ಬಹಳಷ್ಟು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಮಾರ್ಚ್ ಪೂರ್ಣ ತಿಂಗಳ ಗೌರವ ಧನ ಪಾವತಿ ಮಾಡಿರುವುದಿಲ್ಲ. ಕೆಲವು ಕಾಲೇಜುಗಳಲ್ಲಿ ಮಾರ್ಚ್ 21ರವರೆಗೆ ಅರ್ಧ ವೇತನ ಪಾವತಿ ಮಾಡಲಾಗಿದೆ. ಸರ್ಕಾರದ ಸೂಚನೆ/ನಿರ್ದೇಶನ ಇಲ್ಲದ ಕಾರಣ ಆಯಾ ಕಾಲೇಜಿನ ಪ್ರಾಂಶುಪಾಲರ ಖಾತೆಯಲ್ಲಿ ಹಣ ಇದ್ದರೂ ಅತಿಥಿ ಉಪನ್ಯಾಸಕರಿಗೆ ಪಾವತಿ ಮಾಡಿರುವುದಿಲ್ಲ. ಈ ಮೂಲಕ ಅತಿಥಿ ಉಪನ್ಯಾಸಕರನ್ನು ಶೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಯುಜಿಸಿ ನಿಯಮಾನುಸಾರ ಕಾರ್ಯಭಾರದ ಹಂಚಿಕೆಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರಿಗೆ ಗೌರವ ಧನ ಪಾವತಿ ಮಾಡಬೇಕಾಗಿರುತ್ತದೆ. ಯುಜಿಸಿ ನಿಬಂಧನೆಗಳ ಅನ್ವಯ ಅತಿಥಿ ಉಪನ್ಯಾಸಕರು ಶೈಕ್ಷಣಿಕ ಸ್ನಾತಕೊತ್ತರ ಪದವಿಗಳನ್ನು ಮತ್ತು ವಿಶೇಷ ಅರ್ಹತೆಗಳನ್ನು ಹೊಂದಿದ್ದು ಅವರಿಗೆ ಕಾಯಂ ಉಪನ್ಯಾಸಕರ ವೇತನಕ್ಕೆ ಸಮಾನಾಂತರವಾಗಿ ಕಾರ್ಯಭಾರದ ಗೌರವ ಧನ ನೀಡಬೇಕು. ಆದರೆ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಅರ್ಥಿಕ ಇಲಾಖೆಯ ನೆಪ ನೀಡಿ ಹೆಚ್ಚುವರಿ ಗೌರವ ಧನ ನೀಡುತ್ತಿಲ್ಲ ಎಂದರು.
ಪ್ರತಿ ಅತಿಥಿ ಉಪನ್ಯಾಸಕರಿಗೆ ಮಾಸಿಕ ಕನಿಷ್ಠ ಇಪ್ಪತೈದು ಸಾವಿರ ರೂಪಾಯಿ ಗೌರವ ಧನ, ಸೇವಾ ಭದ್ರತೆ, ವರ್ಷದ 12 ತಿಂಗಳ ಪಾವತಿ, ಇತರೆ ಸೇವಾ ಸೌಲಭ್ಯ ಮತ್ತು ನಿರಂತರ ಕಾರ್ಯಭಾರ ಹಂಚಿಕೆಯ ಬೇಡಿಕೆಗಳು ಇದುವರೆಗೆ ಜಾರಿ ಆಗಿರುವುದಿಲ್ಲ. ರಾಜ್ಯ ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಅವರು ಮನವಿ ಮಾಡಿದ್ದಾರೆ.