ಬೆಂಗಳೂರು:ವೀರಶೈವ ಪರಂಪರೆಯ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕಾ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಂಭಾಪುರಿ ಶ್ರೀಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಸದ್ಯ ಜ್ವರ ವಾಸಿಯಾಗಿದ್ದರೂ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶ್ರೀಗಳು ಶೀಘ್ರವಾಗಿ ಗುಣಮುಖರಾಗುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಾರ್ಥಿಸಿದ್ದಾರೆ. ರಂಭಾಪುರಿ ಪೀಠದ ಪ್ರಸನ್ನ ರೇಣುಕಾ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಶೀಘ್ರದಲ್ಲಿ ಪೂರ್ಣ ಗುಣಮುಖರಾಗಿ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮಾಡಿ ಸಿಎಂ ಪ್ರಾರ್ಥಿಸಿದ್ದಾರೆ.
ಶೀಘ್ರ ಗುಣಮುಖರಾಗುವಂತೆ ಸಿಎಂ ಪ್ರಾರ್ಥನೆ ರಂಭಾಪುರಿ ಶ್ರೀಗಳು ಶೀಘ್ರ ಗುಣಮುಖರಾಗುವಂತೆ ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಪ್ರಾರ್ಥಿಸಿದ್ದಾರೆ. ರಂಭಾಪುರಿ ಶ್ರೀಗಳಿಗೆ ಕೊರೊನಾ ಸೋಂಕು ತಗುಲಿದ್ದು ಮನಸ್ಸಿಗೆ ಬಹಳಷ್ಟು ವೇದನೆಯಾಗಿದೆ. ಮಹಾಸ್ವಾಮೀಜಿಯವರು ಬೇಗ ಗುಣಮುಖರಾಗಿ ಪೀಠಕ್ಕೆ ಮರಳಿ ಬರುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.
ರಂಭಾಪುರಿ ಶ್ರೀಗಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಕೊರೊನಾ ಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾರೂ ಆತಂಕ ಪಡಬೇಕಾಗಿಲ್ಲ. ಗಾಳಿ ಸುದ್ದಿಗಳಿಗೆ, ಊಹಾಪೋಹಗಳಿಗೆ ಯಾವುದೇ ಕಾರಣಕ್ಕೂ ಆದ್ಯತೆ ನೀಡಬಾರದು. ಕೋಟ್ಯಂತರ ಭಕ್ತರ ಕಣ್ಮಣಿಯಾಗಿರುವ ಶ್ರೀಗಳ ಆರೋಗ್ಯಕ್ಕೆ ಎಲ್ಲರೂ ಸೇರಿ ಪ್ರಾರ್ಥಿಸೋಣ. ಅನಗತ್ಯ ಚರ್ಚೆ, ಸಂದೇಶ ಬೇಡ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಜಗದ್ಗುರುಗಳು ಸಂದೇಶ ನೀಡಿದ್ದಾರೆ.