ಬೆಂಗಳೂರು: ಬಿಬಿಎಂಪಿ ವಾರ್ಡ್ ವಿಂಗಡಣೆ ವಿಚಾರದಲ್ಲಿ ಕೇಳಿ ಬಂದ ಯಾವುದೇ ಆಕ್ಷೇಪಣೆ ಹೊರಬರದಂತೆ ಬಿಜೆಪಿ ತಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ವಾರ್ಡ್ ವಿಂಗಡನೆ ಮಾಡಿದ್ದಾರೆ. ಜನರಿಗೆ ತೊಂದರೆ ನೀಡುವ ರೀತಿ ಅವೈಜ್ಞಾನಿಕವಾಗಿ ವಾರ್ಡ್ ವಿಂಗಡಣೆ ಮಾಡಲಾಗಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ಯಾವುದೇ ಅರ್ಜಿಯೂ ಹೊರ ಬರದಂತೆ ತಡೆಯಲಾಗಿದೆ. ತಮಗೆ ಬೇಕಾದ ರೀತಿ, ಕಾಂಗ್ರೆಸ್ಗೆ ಮಾರಕವಾಗುವ ರೀತಿ ವಾರ್ಡ್ ವಿಂಗಡಣೆ ಮಾಡಲಾಗಿದೆ. ವಿಧಾನಸಭೆ ಕ್ಷೇತ್ರವಾರು ವಿಂಗಡಣೆ ಮಾಡುವಾಗ ಜನಸಂಖ್ಯಾವಾರು ಸಮರ್ಪಕವಾಗಿ ವಿಂಗಡಣೆ ಆಗಿಲ್ಲ. ಕಾಂಗ್ರೆಸ್ ಸದಸ್ಯರು ಇರುವ ಕ್ಷೇತ್ರಗಳಲ್ಲಿ ಕಡಿಮೆ ವಾರ್ಡ್ ಬರುವಂತೆ ಮಾಡಲಾಗಿದೆ. ಹೆಸರು ಇಡುವ ಕಾರ್ಯ ಸರ್ಕಾರ ಮಾಡಬೇಕಿತ್ತು. ಆದರೆ ವಾರ್ಡ್ ವಿಂಗಡಣಾ ಸಮಿತಿ ಈ ಕಾರ್ಯ ಮಾಡಿದೆ ಎಂದು ಆರೋಪಿಸಿದರು.
ವಾರ್ಡ್ ವಿಂಗಡಣೆ ಸಲ್ಲಿಸಿದ್ದ ಆಕ್ಷೇಪಣೆಗಳ ತಿರಸ್ಕಾರ:ಮೂರು ಸಾವಿರ ಆಕ್ಷೇಪಣೆ ಇದ್ದವು. ಯಾವುದನ್ನೂ ಪರಿಗಣಿಸಿಲ್ಲ. 35 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ಆಗಬೇಕು. ಹಾಗೆ ಮಾಡಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಸೋಮವಾರ ನಾವು ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿದ್ದು, ವಕೀಲರನ್ನು ಸಂಪರ್ಕಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರತಿಪಕ್ಷ ಶಾಸಕರು ಪ್ರತಿನಿಧಿಸುವ ಕ್ಷೇತ್ರದಲ್ಲಿ 103 ವಾರ್ಡ್ ವಿಂಗಡಿಸಿ ನೀಡಬೇಕಿತ್ತು. ಆಡಳಿತ ಪಕ್ಷದ ಕಡೆ 140 ವಾರ್ಡ್ ಹಂಚಿಕೆ ಆಗಬೇಕಿತ್ತು. ಆದರೆ ಪ್ರತಿಪಕ್ಷಕ್ಕೆ 98 ವಾರ್ಡ್ ಹಂಚಿಕೆ ಆಗಿದೆ. ಆಡಳಿತ ಪಕ್ಷದ ಕಡೆ 145 ವಾರ್ಡ್ ಹಂಚಿಕೆ ಮಾಡಲಾಗಿದೆ. ಗೋವಿಂದ ನಗರ, ಮಹದೇವಪುರ, ಪದ್ಮಾನ್ ನಗರ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಹೆಚ್ಚುವರಿ ಒಂದು ವಾರ್ಡ್ ಪಡೆದುಕೊಂಡಿವೆ. ಬ್ಯಾಟರಾಯನಪುರ, ಚಾಮರಾಜಪೇಟೆ, ಜಯನಗರ, ಸರ್ವಜ್ಞನಗರ, ದಾಸರಹಳ್ಳಿ ತಲಾ ಒಂದೊಂದು ವಾರ್ಡ್ ಕಳೆದುಕೊಂಡಿದೆ. ಜಯನಗರ ಹಾಗೂ ವಿಜಯನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಕಡಿಮೆ ಅನುದಾನ ನೀಡಲಾಗಿದೆ ಎಂದು ದೂರಿದರು.