ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಇನ್ಸ್ಪೆಕ್ಟರ್ ನಂದೀಶ್ ಸಾವಿನ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆಯೇ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಚಿವ ಎಂಟಿಬಿ ನಾಗರಾಜ್ ಅವರು ಕೆ.ಆರ್ ಪುರ ಠಾಣೆಯ ಇನ್ಸ್ಪೆಕ್ಟರ್ ನಂದೀಶ್ ಅವರ ಸಾವಿನ ಕುರಿತು, 'ಪೋಸ್ಟಿಂಗ್ಗಾಗಿ 70-80 ಲಕ್ಷ ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತದೆ' ಎಂದು ಬಹಿರಂಗವಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಕಳೆದ ಎರಡು ವರ್ಷಗಳಿಂದ ಪ್ರತಿಪಕ್ಷಗಳು, ಮಾಧ್ಯಮಗಳು ಆರೋಪ ಮಾಡುತ್ತಲೇ ಇವೆ. ಆದರೆ ಈಗ ಸಚಿವ ಎಂಟಿಬಿ ನಾಗರಾಜ್ ಅವರ ಈ ಹೇಳಿಕೆಯಿಂದ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಸಾಬೀತಾಗಿದೆ. ಸರ್ಕಾರದ ವಿರುದ್ಧ ಅವರದೇ ಪಕ್ಷದವರ ಆರೋಪ, ಮಾತುಗಳು ಹೊಸತೇನಲ್ಲ. ಈ ಹಿಂದೆ ಬಿಜೆಪಿ ಶಾಸಕರು ಹಾಗೂ ಪರಿಷತ್ ಸದಸ್ಯರು ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದರು. ಈಗ ಈ ಸರದಿ ಸರ್ಕಾರದ ಸಚಿವರದ್ದಾಗಿದೆ. ನಾಗರಾಜ್ ಅವರು ತಮ್ಮ ಮನದಲ್ಲಿನ ಸತ್ಯವನ್ನು ಹೇಳಿದ್ದಾರೆ. ನಂದೀಶ್ ಸಾವಿನ ಪ್ರಕರಣದ ನ್ಯಾಯಾಂಗ ತನಿಖೆ ಆಗಲಿ ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ಒತ್ತಾಯಿಸುತ್ತೇನೆ ಎಂದರು.
ಈ ಸರ್ಕಾರ ಶೇ.40 ಕಮಿಷನ್ ಸರ್ಕಾರ ಎಂದು ಮತ್ತೊಮ್ಮೆ ರುಜುವಾತಾಗಿದೆ. ಮುಖ್ಯಮಂತ್ರಿಗಳು ಅವರ ಕಾರ್ಯಕ್ರಮದಲ್ಲಿ ಧಮ್ಮು, ತಾಕತ್ತಿನ ಸವಾಲು ಹಾಕಿದ್ದರು. ಈಗ ಅವರಿಗೆ ಧಮ್ಮು, ತಾಕತ್ತು ಇದ್ದರೆ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಇನ್ಸ್ಪೆಕ್ಟರ್ಗೆ 70-80 ಲಕ್ಷ ಆದರೆ, ಡಿಸಿಪಿ ಐಪಿಎಸ್ ಅಧಿಕಾರಿಗಳಿಗೆ ಎಷ್ಟು ರೇಟ್ ನಿಗದಿ ಮಾಡಿದ್ದಾರೆ ಎಂದು ತಿಳಿಸಬೇಕು. ಸಚಿವರ ಮಾತು ನಿಜವಾಗಿದ್ದರೆ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇದು ಸುಳ್ಳಾಗಿದ್ದರೆ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.