ಬೆಂಗಳೂರು : ಲಂಚ ಪಡೆಯುವುದಿಲ್ಲ ಎಂದು ನಾಮಫಲಕ ಅಳವಡಿಸುವ ಸುತ್ತೋಲೆ ಮೂಲಕ ಸರ್ಕಾರ ಪೇ-ಸಿಎಂ ಅಭಿಯಾನದ ಗಮನವನ್ನು ಬೇರೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸೆ.23ರಂದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅವರು ಒಂದು ಟಿಪ್ಪಣಿ ಕಳುಹಿಸಿದ್ದು, ಅದರಲ್ಲಿ ಸಿಟಿಜನ್ ಎನ್ ಕ್ವೈರಿ ಕೌನ್ಸಿಲ್ ಅವರು ಭ್ರಷ್ಟಾಚಾರ ನಿರ್ಮೂಲನ ಅಭಿಯಾನ ಹಮ್ಮಿಕೊಂಡಿದ್ದು, ಸದರಿ ಸಂಸ್ಥೆ ಸಿದ್ದಪಡಿಸಿರುವ ‘ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ’ ಎಂಬ ಶೀರ್ಷಿಕೆ ನಾಮಫಲಕವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕುವಂತೆ ಸುತ್ತೋಲೆ ಹೊರಡಿಸುವಂತೆ ಮನವಿ ಮಾಡಿರುತ್ತಾರೆ. ಈ ಉದ್ದೇಶ ಸರಿಯಾಗಿರಬಹುದು.
ಲಂಚ ಪಡೆಯುವುದಿಲ್ಲ ಎಂಬ ಅಭಿಯಾನ :ಆದರೆ, ಸಿಎಂ ಕಚೇರಿಯಲ್ಲಿ ಈ ಸಿಟಿಜನ್ ಎನ್ಕ್ವೈರಿ ಸಂಸ್ಥೆ ನೀಡಿರುವ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಂತಾಗಿದೆ. ಆ ಮೂಲಕ ಶೇ 40ರಷ್ಟು ಕಮಿಷನ್, ವಿವಿಧ ಇಲಾಖೆಗಳ ನೇಮಕಾತಿ ಅಕ್ರಮಗಳನ್ನು ಒಪ್ಪಿಕೊಂಡಂತಾಗಿದೆ. ನಮ್ಮ ರಾಜ್ಯದಲ್ಲಿ 2.58 ಲಕ್ಷ ಹುದ್ದೆಗಳು ಖಾಲಿ ಇದ್ದು, ಈಗ ನಡೆಸಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ತಾಂಡವವಾಡುತ್ತಿದೆ. ಪಿಎಸ್ಐ ಅಕ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಬಂಧನವಾಗಿದೆ. ಬೇರೆ ಇಲಾಖೆಯಲ್ಲೂ ಲಂಚ ತಾಂಡವವಾಡುತ್ತಿದೆ ಎಂಬುದು ಈ ಟಿಪ್ಪಣಿಯಿಂದ ಸಾಬೀತಾಗಿದೆ ಎಂದಿದ್ದಾರೆ.
ಈಗ ಪೇ ಸಿಎಂ ಅಭಿಯಾನದ ಸಂಚಲನದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಅಭಿಯಾನವನ್ನು ತಾತ್ಕಾಲಿಕವಾಗಿ ಮಾಡುತ್ತಿದ್ದಾರೆ. ಇದು ತೋರಿಕೆಯ ಅಭಿಯಾನವಾಗಿದೆ. ಈ ಪ್ರಕರಣ ತನಿಖೆಯನ್ನು ಲೋಕಾಯುಕ್ತಕ್ಕೂ ನೀಡುತ್ತಿಲ್ಲ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ನ್ಯಾಯಾಂಗ ತನಿಖೆ ನೀಡಿ ನ್ಯಾಯ ಒದಗಿಸಬಹುದಿತ್ತು.
ಆದರೆ ತಮ್ಮ ವ್ಯಾಪ್ತಿ ಸಂಸ್ಥೆಗಳಿಂದ ತನಿಖೆ ಮಾಡಿಸಿ ಕ್ಲೀನ್ ಚಿಟ್ ನೀಡಿದರೆ ಭ್ರಷ್ಟಾಚಾರ ಎಲ್ಲಿ ನಿಯಂತ್ರಣವಾಗುತ್ತದೆ? ನಿನ್ನೆ ಮಾಧ್ಯಮದಲ್ಲಿ ಕಮಿಷನ್ ಇಲ್ಲದೇ ಕಾರ್ಮಿಕ ಇಲಾಖೆಯಲ್ಲಿ ಫೈಲ್ ಮುಂದಕ್ಕೆ ಹೋಗುವುದಿಲ್ಲ ಎಂಬ ವರದಿ ಬಂದಿದೆ ಎಂದರು. ಈ ಭ್ರಷ್ಟಾಚಾರ ತನಿಖೆಗೆ ನಮ್ಮ ಪೂರ್ಣ ಸಹಕಾರ ಇದೆ ಎಂದು ಇದೇ ವೇಳೆ ಹೇಳಿದರು.
ಸರ್ವ ವ್ಯಾಪಿ ಸರ್ವ ಸ್ಪರ್ಶಿ ಭ್ರಷ್ಟಾಚಾರ: ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಮಾತನಾಡಿ, ಇದೇ 23ರಂದು ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸುತ್ತೋಲೆ ಹೊರಡಿಸಿದ್ದು, ನಾಮಫಲಕ ಅಭಿಯಾನ ನಡೆಸಲು ತಿಳಿಸಲಾಗಿದೆ. ಆ ನಾಮ ಫಲಕದಲ್ಲಿ ‘ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ’ ಎಂದು ತಿಳಿಸಿದೆ.
ಇದನ್ನು ಸರ್ಕಾರಿ ಕಚೇರಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಾಕಬೇಕು ಎಂದು ಹೇಳಿದ್ದಾರೆ. ಕಾಡುಗಳನ್ನು ಉಳಿಸಿ ಎಂಬ ಅಭಿಯಾನ ಮಾಡಿದರೆ ಕಾಡುಗಳಿಗೆ ತೊಂದರೆ ಆಗುತ್ತಿದೆ ಎಂದರ್ಥ. ಮಾಯು ಮಾಲೀನ್ಯ ತಡೆಗಟ್ಟಿ ಅಬಿಯಾನ ಮಾಡಿದರೆ ಮಾಲಿನ್ಯ ಹೆಚ್ಚಾಗುತ್ತಿದೆ ಎಂದರ್ಥ. ಆದರೆ ಎನ್ಜಿಒ ಮಾಡುತ್ತಿರುವ ಭ್ರಷ್ಟಾಚಾರ ವಿರುದ್ಧ ಅಭಿಯಾನ ಅಂಗೀಕರಿಸಿ ಸಿಎಂ ಕಚೇರಿಯಿಂದ ಅಭಿಯಾನಕ್ಕೆ ಬೆಂಬಲ ಇದೆ ಎಂದರೆ ಈ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದರ್ಥ.
ಬಜೆಟ್ ನಲ್ಲಿ ಸಿಎಂ ಅವರು ಸರ್ವಸ್ಪರ್ಶಿ ಸರ್ವವ್ಯಾಪಿ ಎಂದು ಹೇಳಿದ್ದರು. ಈ ಅಭಿಯಾನದ ಮೂಲಕ ಈ ಸರ್ಕಾರದಲ್ಲಿ ಸರ್ವ ವ್ಯಾಪಿ ಸರ್ವ ಸ್ಪರ್ಶಿ ಎಂದರೆ ಅದು ಭ್ರಷ್ಟಾಚಾರ ಮಾತ್ರ ಎಂದರು.
ಯುವಕರ ಭವಿಷ್ಯದ ಜೊತೆ ಚೆಲ್ಲಾಟ :ನಿಜವಾದ ನೀಚ ರಾಜಕಾರಣ ಎಂದರೆ, ಯುವಕರ ಭವಿಷ್ಯದ ಜತೆ ಆಟವಾಡುತ್ತಾ ಕೀಳು ರಾಜಕೀಯ ಮಾಡುತ್ತಿರುವುದು. ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿ, ಯುವಕರ ಭವಿಷ್ಯವನ್ನು ನಾಶ ಮಾಡಿರುವುದು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ ಸಿಎಂ ಆಗಿದ್ದೀರಲ್ಲಾ ಅದು ಕೀಳು ರಾಜಕಾರಣ.
ಶಾಲಾ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಕೋಮುವಾದ, ಗೋರಕ್ಷರನ್ನಾಗಿ ಮಾಡುತ್ತಿದ್ದೀರಲ್ಲಾ ಅದು ಕೀಳು ರಾಜಕೀಯ. ಜಟ್ಕಾ ಕಟ್ ಸೇರಿದಂತೆ ಒಂದು ಸಮುದಾಯದ ವಿರುದ್ಧ ಸಮರ ಸಾರಿದಿರಲ್ಲ ಅದು ನೀಚ ರಾಜಕೀಯ. ಎಲ್ಲ ಸರ್ಕಾರಿ ಹುದ್ದೆ ಮಾರಾಟಮಾಡಿ ಯುವಕರ ಭವಿಷ್ಯದ ನಾಶ ಮಾಡುತ್ತಿರುವುದು ನೀಚ ರಾಜಕಾರಣ. ಇದನ್ನು ಪ್ರಶ್ನಿಸಿದರೆ ನಮ್ಮದು ನೀಚ ರಾಜಕಾರಣ ಎಂದು ಹೇಳುತ್ತೀರಿ ಎಂದು ವಾಗ್ದಾಳಿ ನಡೆಸಿದರು.
ನೀವು ಶೇ 40ರಷ್ಟು ಕಮಿಷನ್ ತೆಗೆದುಕೊಂಡಾಗ ರಾಜ್ಯದ ಘನತೆ ಧಕ್ಕೆಯಾಗಲಿಲ್ಲ, ಅದನ್ನು ಪ್ರಶ್ನಿಸಿದಾಗ ರಾಜ್ಯದ ಘನತೆಗೆ ಧಕ್ಕೆಯಾಗಿದೆಯೇ? ಈ ವ್ಯವಸ್ಥೆ ಯಾವ ಹಂತಕ್ಕೆ ಬಂದಿದೆ ಎಂದರೆ ಶಾಸಕರ ಭವನದಲ್ಲಿ ಪಿಎಸ್ ಐ ಅಕ್ರಮದ ಡೀಲ್ ನಡೆದಿದೆ.
ಹೀಗಾಗಿ ಸರ್ಕಾರ ಭ್ರಷ್ಟಾಚಾರ ವಿರುದ್ಧದ ಅಭಿಯಾನವನ್ನು ಕೇವಲ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿ ಇಡದೇ ವಿಧಾನಸೌಧದಲ್ಲಿ ನಿಮ್ಮ ಸಚಿವರ ಕಚೇರಿಗಳಲ್ಲೂ ಈ ಅಭಿಯಾನ ಮಾಡಿ. ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ ನಾನು ಭ್ರಷ್ಟ ಸಚಿವನಾಗಲಾರೆ ಎಂಬ ನಾಮಫಲಕ ಹಾಕಿ. ಈ ನಾಮಫಲಕದಲ್ಲೂ ನೀವು 40% ಕಮಿಷನ್ ಪಡೆಯುತ್ತೀರಿ. ಹೀಗಾಗಿ ಈ ನಾಮಫಲಕವನ್ನು ನಾವು ನೀಡುತ್ತೇವೆ ಎಂದು ಹೇಳಿದರು.
ಸರ್ಕಾರ ತೋರಿಕೆಗೆ ಒತ್ತುವರಿ ತೆರವು ಕಾರ್ಯ ಆರಂಭಿಸಿದೆ: ಪ್ರತಿಪಕ್ಷಗಳ ಆಕ್ರೋಶದ ಹಿನ್ನೆಲೆಯಲ್ಲಿ ಸರ್ಕಾರ ತೋರಿಕೆಗೆ ಒತ್ತುವರಿ ತೆರವು ಕಾರ್ಯ ಆರಂಭಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. 2013ರಿಂದ 2018ರವರೆಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1953 ಒತ್ತುವರಿ ಜಾಗಗಳನ್ನು ಗುರುತಿಸಲಾಗಿತ್ತು.
ಈ ಅವಧಿಯಲ್ಲಿ ಸುಮಾರು 1300 ಒತ್ತುವರಿಯನ್ನು ತೆರವುಗೊಳಿಸಿದ್ದೆವು. ಉಳಿದ 600 ತೆರವುಗಳನ್ನು ನಂತರದ ಸರ್ಕಾರ ಮಾಡಬಹುದಿತ್ತು. ಕಳೆದ 3 ವರ್ಷದಿಂದ ಒಂದು ಒತ್ತುವರಿಯನ್ನು ತೆರವು ಮಾಡಲಿಲ್ಲ. 1 ಕಿ.ಮೀ ನಷ್ಟು ಉದ್ದದ ಕಾಲುವೆ ನಿರ್ಮಾಣ ಮಾಡಲಿಲ್ಲ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ 1500 ಕೋಟಿ ಅನುದಾನ ಮೀಸಲಿಟ್ಟಿದ್ದರು.
ಬಿಜೆಪಿ ಸರ್ಕಾರ ಅದನ್ನು ತಮ್ಮ ಶಾಸಕರಿಗೆ ನೀಡಿತು. ಹೀಗಾಗಿ ಕಾಲುವೆ ನಿರ್ಮಾಣ ಆಗಿಲ್ಲ. ಈಗ ಪ್ರವಾಹ ಬಂದಾಗ ಮೇಲ್ನೋಟಕ್ಕೆ ಬಡವರ ಮನೆ ಕೆಡವಿ ಒತ್ತುವರಿ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಿಲುವು ಯಾರೇ ಇದ್ದರೂ ಒತ್ತುವರಿ ತೆರವುಗೊಳಿಸಬೇಕು. ಬಿಜೆಪಿಯವರಿಗೆ ಅಭಿವೃದ್ಧಿ, ಜನರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಮೊದಲಿನಿಂದಲೂ ಇಲ್ಲ.
ಹೀಗಾಗಿ ಇವರಿಂದ ಜನ ನಿರೀಕ್ಷೆ ಇಟ್ಟುಕೊಳ್ಳಬಾರದು. ಬೊಮ್ಮನಳ್ಳಿ ವಲಯದಲ್ಲಿ 47 ಕೆರೆ ಇದ್ದು, 1167 ಎಕರೆ ಪ್ರದೇಶದಲ್ಲಿ 196 ಎಕರೆ ಒತ್ತುವರಿಯಾಗಿದೆ. ಮಹದೇವಪುರ ಪ್ರದೇಶದ 52 ಕೆರೆ ಪ್ರದೇಶದಲ್ಲಿ 1845 ಎಕರೆ ವಿಸ್ತೀರ್ಣವಿದ್ದು 225 ಎಕರೆ ಒತ್ತುವರಿಯಾಗಿದೆ. ಯಲಹಂಕದಲ್ಲಿ 28 ಕೆರೆಗಳ ಜಾಗದಲ್ಲಿ 133 ಎಕರೆ, ಆರ್ ಆರ್ ನಗರದಲ್ಲಿ 37 ಕೆರೆಗಳಲ್ಲಿ 160 ಎಕರೆ ಒತ್ತುವರಿ ಮಾಡಲಾಗಿದೆ. ರಾಜಕಾಲುವೆ ತೆರವು ಮಾಡಲಾಗಿಲ್ಲ, ಇನ್ನು ಈ 700 ಎಕರೆ ಪ್ರದೇಶಗಳ ಒತ್ತುವರಿ ಮಾಡುತ್ತಾರಾ?’ ಎಂದು ಹೇಳಿದರು.
ಬಿಜೆಪಿಯವರು ಹತಾಶರಾಗಿದ್ದಾರೆ : ಲಿಂಗಾಯತ ಸಿಎಂ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಬಿಜೆಪಿ ವಾದದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಹತಾಶರಾಗಿದ್ದು, ಶೇ 40ರಷ್ಟು ಸರ್ಕಾರ ಎಂಬ ಬಿರುದಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಈ ಸರ್ಕಾರ ಕಮಿಷನ್, ಕರಪ್ಷನ್, ಕಮ್ಯುನಲಿಸಮ್ ಎಂಬ ಮೂರು ಸಿ ಮೇಲೆ ನಿಂತಿದೆ. ಇಂತಹ ಸಮಸ್ಯೆ ಉದ್ಭವಿಸಿದಾಗಲೆಲ್ಲಾ ಅವರು ತಮ್ಮ ಸ್ಟಾಂಡರ್ಡ್ ಆಪರೇಟಿಂಗ್ ಪ್ರಕ್ರಿಯೆ ಮಾಡುತ್ತಾರೆ. ಅದೇನೆಂದರೆ ಧರ್ಮ ಹಾಗೂ ಕೋಮು ರಾಜಕಾರಣ. ನಾವು ಶೇ 40% ಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಿರುವಾಗ ಬಿಜೆಪಿಯವರು ಧರ್ಮ ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಪಿಎಸ್ ಐ ನೇಮಕಾತಿಯಲ್ಲಿ 1.29 ಲಕ್ಷ ಮಂದಿ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. 54 ಸಾವಿರ ಮಂದಿ ಯುವಕರು ಪರೀಕ್ಷೆ ಬರೆದಿದ್ದರು, ಅವರೆಲ್ಲರೂ ಒಂದು ಸಮಾಜಕ್ಕೆ ಸೇರಿದವರೇ? ಕೆಪಿಟಿಸಿಎಲ್ ಪರೀಕ್ಷೆ ಬರೆದ 3.50 ಲಕ್ಷ ಜನ ಒಂದು ಸಮುದಾಯದವರೇ? ಪ್ರವಾಹದಲ್ಲಿ ರೈತರು ಬೆಳೆ ಕಳೆದುಕೊಂಡು, ಜನ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ.
ಅವರೆಲ್ಲ ಯಾವ ಸಮುದಾಯದವರು? ಈ ಸಂತ್ರಸ್ತರ ಪರವಾಗಿ ಹೋರಾಟ ಮಾಡಿದರೆ, ಒಂದು ಸಮುದಾಯದ ವಿರುದ್ಧ ಹೋರಾಟ ಮಾಡಿದಂತೆಯೇ? ರೈತರು, ಯುವಕರು, ಮಹಿಳೆಯರ ಪರ ಧ್ವನಿ ಎತ್ತಿದರೆ ಧರ್ಮ, ಜಾತಿಯನ್ನು ಅಡ್ಡ ತರುತ್ತೀರಾ? ಸಿದ್ದರಾಮಯ್ಯ ಅವರನ್ನು ನೀವು ಟೀಕಿಸಿದಾಗ ನೀವು ಅಹಿಂದಾ ವಿರೋಧಿಗಳು ಎಂದು ಹೇಳಬಹುದೇ? ಖರ್ಗೆ ಅವರನ್ನು ಟೀಕಿಸಿದಾಗ ನೀವು ದಲಿತ ವಿರೋಧಿಗಳು ಎಂದು ಹೇಳಬಹುದೇ? ಎಂ.ಬಿ ಪಾಟೀಲ್, ಖಂಡ್ರೆ ಎವರ ವಿರುದ್ಧ ಮಾತನಾಡಿದರೆ ನೀವು ಲಿಂಗಾಯತ ವಿರೋಧಿ ಆಗುತ್ತೀರಾ? ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ, ಜಾತಿ ರಾಜಕೀಯ ಮಾಡುತ್ತಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
2006ರಿಂದ ಎಲ್ಲ ಹಗರಣಗಳನ್ನು ನ್ಯಾಯಾಂಗ ತನಿಖೆ ಮಾಡಿ : ಇನ್ನು ರಾಮಲಿಂಗಾರೆಡ್ಡಿ ಮಾತನಾಡಿ , ‘ಬಿಜೆಪಿಯವರು ಸ್ಕ್ಯಾಮ್ ಸಿದ್ದರಾಮಯ್ಯ ಎಂದು ಪುಸ್ತಕ ಮಾಡಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕರಾಗಿದ್ದು, ಬಿಜೆಪಿ ಹಿಂದುಳಿದ ವರ್ಗದ ವಿರೋಧಿಗಳಾ? ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾತನಾಡಿರುವ ಬಿಜೆಪಿಗರು ಒಕ್ಕಲಿಗ ವಿರೋಧಿಗಳೇ? ನನ್ನ ಮೇಲೆ ಮಾತನಾಡಿದ್ದಕ್ಕೆ ರೆಡ್ಡಿಗಳ ವಿರೋಧಿಗಳೇ? ನಿಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಜಾತಿ ರಾಜಕಾರಣ ಮಾಡಬೇಡಿ ಎಂದು ಟಾಂಗ್ ಕೊಟ್ಟರು.
ಇದರಿಂದ ನೀವು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಜನ ನಿಮ್ಮ ಕಳ್ಳಾಟ ಅರ್ಥಮಾಡಿಕೊಳ್ಳುತ್ತಾರೆ. ಇನ್ನಾದರೂ ನಿಮ್ಮ ಕುಚೇಷ್ಟೆ ಬಿಟ್ಟು ಜನರಿಗೆ ಉದ್ಯೋಗ ನೀಡಿ, ಭ್ರಷ್ಟಾಚಾರ ರಹಿತ ಆಡಳಿತ ನೀಡಿ. ರೈತರು, ಕಾರ್ಮಿಕರು, ಯುವಕರ ಕಷ್ಟಕ್ಕೆ ಸ್ಪಂದಿಸಿ. ಅಧಿಕಾರದಲ್ಲಿರುವ ನೀವು ಒಳ್ಳೆಯ ಕೆಲಸ ಮಾಡಿ. ನಿಮಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಆಸಕ್ತಿ ಇದ್ದರೆ 2006ರಿಂದ ಇಲ್ಲಿಯವರೆಗೂ ಎಲ್ಲ ಹಗರಣಗಳನ್ನು ನ್ಯಾಯಾಂಗ ತನಿಖೆಗೆ ನೀಡಿ’ ಎಂದು ರಾಮಲಿಂಗಾ ರೆಡ್ಡಿ ಸವಾಲು ಹಾಕಿದರು.
ಇದನ್ನೂ ಓದಿ :ಸಿದ್ದರಾಮಯ್ಯ ತಾವು ಉಡುವ ಪಂಚೆಯಷ್ಟೇ ಕ್ಲೀನ್ ಇದ್ದಾರಾ: ಸಿಟಿ ರವಿ ಪ್ರಶ್ನೆ