ಬೆಂಗಳೂರು : ರಾಜ್ಯದ ಬಿಜೆಪಿ ಸಂಸದರಿಗೆ ಪ್ರಧಾನಿ ಮುಂದೆ ಮಾತನಾಡುವ ಧಮ್ ಇಲ್ಲ. ತಿರುಪತಿಗೆ ದೂರದಲ್ಲಿ ನಿಂತು ನಮಸ್ಕಾರ ಹಾಕಿದಂತೆ ಪ್ರಧಾನಿಗೆ ನಮಸ್ಕರಿಸಿ ಬರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಟಾಂಗ್ ನೀಡಿದರು.
ಮೇಕೆದಾಟು ಪಾದಯಾತ್ರೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಫೆ.27ರಿಂದ ರಾಮನಗರದಿಂದ ಪಾದಾಯಾತ್ರೆ ಆರಂಭಿಸುತ್ತೇವೆ. ಫೆ. 28ಕ್ಕೆ ಬಿಡದಿಯಿಂದ ಕೆಂಗೇರಿಗೆ ಬರುತ್ತೇವೆ. ಮಾ. 1ರಿಂದ 3ರವರೆಗೆ ಬೆಂಗಳೂರು ಭಾಗದಲ್ಲಿ ಪಾದಯಾತ್ರೆ ಸಾಗಲಿದೆ. ಮೊದಲು ಬೆಂಗಳೂರಿನಲ್ಲಿ 5 ದಿನ ಪಾದಯಾತ್ರೆ ಇಟ್ಟುಕೊಂಡಿದ್ವಿ. ಬಜೆಟ್ ಅಧಿವೇಶನ ಕಾರಣ 3 ದಿನಕ್ಕೆ ಮೊಟಕುಗೊಳಿಸಲಾಗಿದೆ ಎಂದರು.
ಮಾ.1ರಂದು ಜ್ಞಾನಭಾರತಿ ಮೆಟ್ರೋ ನಿಲ್ದಾಣ, ನಾಯಂಡಹಳ್ಳಿ, ಕತ್ರಿಗುಪ್ಪೆ, ಕದಿರೇನಹಳ್ಳಿ, ಬನಶಂಕರಿ ದೇಗುಲ, ಜಯದೇವ ಆಸ್ಪತ್ರೆ, ಹೊಸೂರು ರಸ್ತೆ, ಇನ್ಫ್ಯಾಂಟ್ರಿರಸ್ತೆ, ಹಾಸ್ಮ್ಯಾಟ್ ರಸ್ತೆ, ತಿರುವಳ್ಳವರ್ ಪ್ರತಿಮೆ ರಸ್ತೆ, ನಂದಿದುರ್ಗ, ಜೆಸಿನಗರ, ಮೇಖ್ರಿ ಸರ್ಕಲ್, ಅರಮನೆ ಮೈದಾನ, ಕಾವೇರಿ, ಸ್ಯಾಂಕಿರಸ್ತೆ, ಮಾರ್ಗೊಸಾ ರಸ್ತೆ, ಶೇಷಾದ್ರಿಪುರಂ, ಕಾಟನ್ ಪೇಟೆ, ರಾಯನ್ ಸರ್ಕಲ್, ಈದ್ಗಾ ಮೈದಾನವಾಗಿ ಸಾಗಿ ಬಂದು ಮಾ.3ಕ್ಕೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಕೊನೆಯಾಗಲಿದೆ ಎಂದು ವಿವರಿಸಿದರು.
ನಮ್ಮ ಸರ್ಕಾರ ಇದ್ದಾಗ ಡಿಪಿಆರ್ ಮಾಡಲಾಗಿದೆ. ಯಾವ ರಾಜ್ಯದ ಅನುಮತಿ ಬೇಕಿಲ್ಲ. ನಮ್ಮ ರಾಜ್ಯದಲ್ಲಿ ಮಾಡುತ್ತಿರುವ ಯೋಜನೆಯಾಗಿದೆ. ಈ ಯೋಜನೆಯಿಂದ ವಿದ್ಯುತ್ ಕೂಡ ಸಿಗುತ್ತೆ. ಆದರೆ, ಕೇಂದ್ರದಿಂದ ಪರಿಸರ ಅನುಮೋದನೆ ಸಿಗುವಂತೆ ಮಾಡಲು ಬಿಜೆಪಿ ಸರ್ಕಾರಕ್ಕೆ ಆಗುತ್ತಿಲ್ಲ. ಎಂಪಿಗಳಿಗೆ ಮೋದಿ ಮುಂದೆ ನಿಂತು ಕೇಳುವ ಧಮ್ ಇಲ್ಲ. ಪಾರ್ಲಿಮೆಂಟ್ ಅಲ್ಲಿ ಕೂಡ ಮಾತನಾಡಲ್ಲ. ಮೋದಿ ಹೋಗ್ತಿದ್ದರೆ ನಮಸ್ಕಾರ ಮಾಡಿ ಕುಳಿತುಕೊಳ್ಳುತ್ತಾರೆ ಎಂದು ಟೀಕಿಸಿದರು.