ಬೆಂಗಳೂರು: ಬಿಬಿಎಂಪಿ ವಾರ್ಡ್ ವಿಂಗಡನೆಯನ್ನು ಬಿಜೆಪಿಯವರ ಕಚೇರಿ, ಕೇಶವ ಕೃಪಾ, ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನೀಡಿದ ಡಿಲಿಮಿಟೇಷನನ್ಗೆ ಕಮಿಷನರ್ ಸಹಿ ಹಾಕಿದ್ದಾರೆ ಅಷ್ಟೇ. ಪಾಲಿಕೆಯ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸರ್ವೆ ಮಾಡಿಲ್ಲ. ಯಾವ ಅಧಿಕಾರಿಗಳಿಗೂ ಡಿಲಿಮಿಟೇಷನ್ ಬಗ್ಗೆ ಮಾಹಿತಿ ಇಲ್ಲ. ಕಂದಾಯ ಇಲಾಖೆ ಅಧಿಕಾರಿಗಳಿಗೂ ವಾರ್ಡ್ ಮರು ವಿಂಗಡಣೆ ಬಗ್ಗೆ ಗೊತ್ತಿಲ್ಲ ಎಂದರು.
ಬಿಬಿಎಂಪಿ ಚುನಾವಣೆಯನ್ನು ಎಷ್ಟು ವರ್ಷ ಮುಂದೂಡಲು ಸಾಧ್ಯ?. ಲೋಪದೋಷಗಳಿದ್ದರೆ ಆಕ್ಷೇಪಣೆ ಹಾಕಿ, ನಂತರ ಕೋರ್ಟ್ಗೆ ಹೋಗಬೇಕಾ ಎಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ವಾರ್ಡ್ ಪುನರ್ ವಿಂಗಡನೆ ವಿಚಾರವಾಗಿ ಮುಖ್ಯ ಆಯುಕ್ತರ ಸಮಿತಿ ಯಾವುದೇ ಸಭೆಗಳನ್ನು ನಡೆಸಿಲ್ಲ. ಯಾರ ಅಭಿಪ್ರಾಯವನ್ನೂ ಸಂಗ್ರಹಿಸದೇ ವಾರ್ಡ್ ಪುನರ್ ವಿಂಗಡನೆ ಮಾಡಿದ್ದಾರೆ. ಯಾರಿಗೂ ಮಾಹಿತಿ ನೀಡದೆ ಅವರೇ ಮಾಡಿಕೊಂಡಿದ್ದಾರೆ. ನಮಗೆ ಹಾರ್ಡ್ ಕಾಪಿ ಸಿಕ್ಕಮೇಲೆ ಅದ್ರಲ್ಲಿ ಏನು ಲೋಪದೋಷಗಳಿವೆ ಎಂದು ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಬೇಕೆಂದ್ರಷ್ಟೇ ವಿದ್ಯುತ್ ವಿತರಣೆ ಉಚಿತ.. ಇಲ್ಲದಿರೆ ಬಿಲ್ ಬರೋದು ಖಚಿತ.. ಯೋಜನೆ ಬದಲಿಸುವತ್ತ ಕೇಜ್ರಿವಾಲ್ ಚಿತ್ತ..