ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ, 2016-17ನೇ ಸಾಲಿನಿಂದ ಆಸ್ತಿ ತೆರಿಗೆ ಮೊತ್ತವನ್ನು ಪಾವತಿಸುವಂತೆ ಸಾರ್ವಜನಿಕರಿಗೆ ನೋಟಿಸ್ ನೀಡುತ್ತಿರುವ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರೆಡ್ಡಿ, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. "ಬಿಬಿಎಂಪಿ ಪರಿಷ್ಕರಿಸಿದ ಆಸ್ತಿ ತೆರಿಗೆ ಮೊತ್ತವನ್ನು ಪಾವತಿಸುವಂತೆ ಸಾರ್ವಜನಿಕರಿಗೆ ನೋಟಿಸ್ ನೀಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಕೆಎಂಸಿ ಕಾಯ್ದೆ 1976 ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020ರ ಪ್ರಕಾರ 7 ವರ್ಷಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವುದು ನಿಯಮಬಾಹಿರ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
"ಬಿಬಿಎಂಪಿ ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದೇ, ಅವೈಜ್ಞಾನಿಕವಾಗಿ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ, 2016-17ನೇ ಸಾಲಿನಿಂದ ಅಂದರೆ, ಒಟ್ಟು 7 ವರ್ಷಗಳಿಗೆ ಪರಿಷ್ಕರಣೆ ಆಸ್ತಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿರುವುದು ಕಂಡುಬಂದಿದೆ. ಈ ರೀತಿ ಸಾರ್ವಜನಿಕರ ಮೇಲೆ ಒತ್ತಡ ತರುತ್ತಿರುವುದು ಸರಿಯಲ್ಲ" ಎಂದು ಹೇಳಿದ್ದಾರೆ.