ಬೆಂಗಳೂರು:ಆಮೆಗತಿಯಲ್ಲಿದ್ದ ಡೈರಿ ಸರ್ಕಲ್ ವೈಟ್ ಟಾಪಿಂಗ್ ಕಾಮಗಾರಿ ಹತ್ತು ದಿನದಲ್ಲಿ ಪೂರ್ಣಗೊಳ್ಳಲಿದೆ. ಆದರೆ ಮತ್ತೆ ಟ್ರಾಫಿಕ್ ಜಾಂ ಸಮಸ್ಯೆ ಬಿಗಡಾಯಿಸಲಿದೆ. ಯಾಕಂದ್ರೆ ಇದೇ ರಸ್ತೆಯ ಮತ್ತೊಂದು ಪಾರ್ಶ್ವದ ಕ್ರೈಸ್ಟ್ ಕಾಲೇಜು ರಸ್ತೆಯಲ್ಲಿ ವೈಟ್ ಟಾಪಿಂಗ್ ನಡೆಯಲಿದೆ.
ಹೌದು, ಇಂದು ಸ್ಥಳೀಯ ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳ ಜೊತೆ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು. ಡೈರಿ ಸರ್ಕಲ್ನಿಂದ ಚೆಕ್ ಪೋಸ್ಟ್ವರೆಗೆ 1.2 ಕಿ.ಮೀ. ರಸ್ತೆಯ ವೈಟ್ ಟಾಪಿಂಗ್ ಮುಗಿದಿದ್ದು, ಇನ್ನೊಂದು ಪಾರ್ಶ್ವದ ರಸ್ತೆ ಕಾಮಗಾರಿಗೆ ಪೊಲೀಸ್ ಇಲಾಖೆಯ ಅನುಮತಿಯೂ ಸಿಕ್ಕಿದೆ. ರಸ್ತೆಯ ಫುಟ್ಪಾತ್ ಕಾಮಗಾರಿ ಹಾಗೂ ಜಲಮಂಡಳಿಯ ಪೈಪ್ ಲೈನ್ ಕಾಮಗಾರಿಗಳು ಬಾಕಿ ಇದ್ದು, ಇನ್ನು ಕೆಲ ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.