ಬೆಂಗಳೂರು:ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ನಡೆದಿರುವ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರು ಉದ್ದೇಶಪೂರ್ವಕವಾಗಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆ ಹೈಕೋರ್ಟ್ ನ್ಯಾಯಧೀಶರೊಬ್ಬರ ಮೇಲ್ವಿಚಾರಣೆಯಲ್ಲಿ ಸಿಐಡಿ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಪಿಎಸ್ಐ ನೇಮಕಾತಿ ಪಟ್ಟಿಯನ್ನೇ ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಲಾಗುವುದು ಎಂದು ಗೃಹ ಸಚಿವರು ಘೋಷಿಸಿದ್ದಾರೆ. ಈ ಪರೀಕ್ಷೆಯಲ್ಲಿ ಭಾರಿ ಅಕ್ರಮ, ಭ್ರಷ್ಟಾಚಾರ ಅಗಿದ್ದು, ದಿನಕ್ಕೊಂದು ಸಂಗತಿಗಳು ಬೆಳಕಿಗೆ ಬಂದಿರುವುದರಿಂದ ಈ ಪಟ್ಟಿ ರದ್ದಾಗಲೇಬೇಕಿತ್ತು. ಸಹಜವಾಗಿ ಅದನ್ನು ಮಾಡಿದ್ದಾರೆ. ಆದರೆ ಈ ಮೂಲಕ ಜನರ ಗಮನ ಬೇರೆಡೆ ಸೆಳೆದು ಆರೋಪಿಗಳನ್ನು ರಕ್ಷಿಸಬಹುದೆಂದು ಗೃಹ ಮಂತ್ರಿ ತಿಳಿದಿದ್ದರೆ, ಅದು ಮೂರ್ಖತನವಾದೀತು ಎಂದು ಹೇಳಿದ್ದಾರೆ.
ನಿಷ್ಪಕ್ಷಪಾತ ತನಿಖೆ ಹೇಗೆ ಸಾಧ್ಯ?:ಆದರೆ, ನೇಮಕಾತಿ ಪಟ್ಟಿ ರದ್ದುಪಡಿಸಿರುವ ಗೃಹ ಸಚಿವರು, ಈ ಅಕ್ರಮಕ್ಕೆ ಕಾರಣವಾದ ದೊಡ್ಡ ದೊಡ್ಡ ಕುಳಗಳ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ? ನೇಮಕಾತಿ ಮಾಡಿದವರೂ ಪೊಲೀಸ್ ಇಲಾಖೆಯೇ ಆಗಿದೆ. ಅಕ್ರಮದಲ್ಲಿ ಶಾಮೀಲಾಗಿರುವವರೂ ಪೊಲೀಸರೇ, ತನಿಖೆ ನಡೆಸುತ್ತಿರುವವರು ಪೊಲೀಸರೇ. ಅಕ್ರಮದ ಪ್ರಮುಖ ಆರೋಪಿ ದಿವ್ಯ ಹಾಗರಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸೇರಿದವರು. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಯಲು ಹೇಗೆ ಸಾಧ್ಯ? ಹೀಗಾಗಿ ಸರ್ಕಾರದ ನೇರ ನಿಯಂತ್ರಣದಲ್ಲಿ ಇರುವ ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದಿದ್ದಾರೆ.