ಬೆಂಗಳೂರು : ಉಪಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಅಕ್ರಮ ನಡೆಸುತ್ತಿದೆ, ಆದರೆ ಚುನಾವಣಾ ಆಯೋಗ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಿರಾದಲ್ಲಿ ಪ್ರೀತಂ ಗೌಡ ಹಣ ಹಂಚುತ್ತಿದ್ದಾರೆ, ಆ ಬಗ್ಗೆ ವಿಡಿಯೋ ಇದೆ. ಆದರೆ, ಯಾರ ಮೇಲೆ ಕೂಡ ಕ್ರಮ ಕೈಗೊಂಡಿಲ್ಲ. ಚುನಾವಣಾ ಆಯೋಗ ಇದೆಯೋ ಇಲ್ವೋ..? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಮೋದಿ ಪರ ಘೋಷಣೆ ಕೂಗಿದ ಬಗ್ಗೆ ಪ್ರತಿಕ್ರಿಯಿಸಿ, ಹೋಗಿ ಬಿಜೆಪಿ ಕಾರ್ಯಕ್ರಮದಲ್ಲಿ ಮೋದಿ ಮೋದಿ ಎಂದು ಕಿರುಚಲಿ. ಹೋಗಿ ತಮ್ಮ ಕಾರ್ಯಕ್ರಮದಲ್ಲಿ ಬಾಯ್ ಬಡ್ಕೊಳ್ಳಲಿ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೂ ಬಿಜೆಪಿಯವರು ಹೀಗೆ ಮೋದಿ ಮೋದಿ ಎಂದು ಕೂಗ್ತಾ ಇದ್ರು, ಮಾನ ಮರ್ಯಾದೆ ಇಲ್ವಾ ಬಿಜೆಪಿಯವರಿಗೆ. ಅಶೋಕ, ಅಶ್ವತ್ಥ್ ನಾರಾಯಣ ಅವರಿಗೆ ಬುದ್ದಿ ಹೇಳ್ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಬಗ್ಗೆ ಅನುಮಾನ :
ಪ್ರಜಾಪ್ರಭುತ್ವದಲ್ಲಿ ಎಲ್ಲ ಪಕ್ಷದವರು ಸ್ಪರ್ಧೆ ಮಾಡಬಹುದು. ಕಾನೂನು ಬದ್ದವಾಗಿ ಎಲ್ಲರೂ ಪ್ರಚಾರ ಮಾಡುವ ಹಕ್ಕಿದೆ. ಆದರೆ, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ವೋ ಎಂದು ಅನುಮಾನ ಮೂಡ್ತಾ ಇದೆ. ಪೊಲೀಸರು ಕೆಲಸ ಮಾಡ್ತಾ ಇದಾರೋ ಇಲ್ವೋ ಗೊತ್ತಾಗ್ತಿಲ್ಲ. ಸಿದ್ದರಾಮಯ್ಯ ಪ್ರಚಾರದ ವೇಳೆ ವೆಂಕಟೇಶ ಎಂಬ ಮಾಜಿ ಕಾರ್ಪೋರೇಟರ್ ಸಿದ್ದರಾಮಯ್ಯ ಅವರ ಕಾರು ಅಡ್ಡಗಟ್ಟುತ್ತಾರೆ ಅಂದ್ರೆ ಏನರ್ಥ..? ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೋದಿ ಮೋದಿ ಎಂದು ಕೂಗುವ ಅವಶ್ಯಕತೆ ಏನಿದೆ..? ನಾವು ಬಿಜೆಪಿ ಕಾರ್ಯಕ್ರಮದಲ್ಲಿ ಹೋಗಿ ರಾಹುಲ್ ರಾಹುಲ್ ಅಂತಾ ಕೂಗಬಹುದಾ..? ಅವರು ಬದಲಾಗಬೇಕಾಗುತ್ತೆ. ಇಲ್ಲಾ ಅಂದ್ರೆ ನಾವು ಕೂಡ ಹಾಗೆ ಮಾಡಬೇಕಾಗುತ್ತೆ. ಪೊಲೀಸ್ ಕಮಿಷನರ್ ಏನ್ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.
ಪ್ಯಾರಾ ಮಿಲಿಟರಿ ಯಾಕೆ ಬೇಕು..?
ನಾಳೆ ಯಡಿಯೂರಪ್ಪ ಬರ್ತಾರೆ, ನಾವು ಅವರ ಕಾರಿಗೆ ಅಡ್ಡ ಹಾಕಬಹುದಾ..? ಹಾಗಾದರೆ ಕ್ಷೇತ್ರದಲ್ಲಿ ಪ್ಯಾರಾ ಮಿಲಿಟರಿ ಯಾಕೆ ಬೇಕು..? ನಾವು ಏನ್ ಕೀಳು ಮಟ್ಟದ ರಾಜಕೀಯ ಮಾಡ್ತಿದ್ದೀವಾ..? ನಾವೇನಾದ್ರೂ ಗಲಾಟೆ ಮಾಡಿದ್ವಾ...? ಏನ್ ಇಲ್ವಲ್ಲಾ. ಅಶೋಕ್ ಮಠಗಳಿಗೆ ಹೋಗಲ್ವಾ..? ಬಿಜೆಪಿ ಧರ್ಮ, ಜಾತಿ, ಭಾಷೆ ಒಡೆದು ಗೆಲ್ಲೋದಿಲ್ವಾ..? ಬಿಜೆಪಿಯವರು ಏನು ಸ್ವಾತಂತ್ರ್ಯ ಹೋರಾಟದಲ್ಲಿ ಇದ್ರಾ..? ಇವರ ಪೂರ್ವಜರೆಲ್ಲ ಬ್ರಿಟಿಷರ ಜೊತೆ ಸೇರ್ಕೊಂಡಿದ್ರು. ನಾವು ದೇಶಭಕ್ತರು, ಬಿಜೆಪಿಯವರು ನಕಲಿ ದೇಶಭಕ್ತರು ಕಿಡಿ ಕಾರಿದರು.