ಬೆಂಗಳೂರು : ವೇದಗಳು ಎಂದರೆ ಜ್ಞಾನಗಳ ಭಂಡಾರ, ಅದನ್ನು ಬಿಟ್ಟು ಜ್ಞಾನಿಗಳಾಗುವುದು ಕಷ್ಟ ಸಾಧ್ಯ. ಅವುಗಳು ಹಿಂದೆ, ಇಂದು, ಮುಂದೆಯೂ ಸತ್ಯವಾಗಿರುವಂತಹದ್ದು. ಇವಕ್ಕೆ ಎಂದಿಗೂ ಸಾವಿಲ್ಲ. ಋಷಿಗಳು ಮಂತ್ರಗಳಿರುವ ನಾಲ್ಕು ವೇದಗಳನ್ನು ನಮ್ಮ ಸಂಸ್ಕೃತಿಗೆ ಕೊಡುಗೆಯಾಗಿ ಕೊಟ್ಟು ಹೋಗಿದ್ದಾರೆ ಎಂದು ರಾಮಕೃಷ್ಣ ಮಠದ ವೀರೇಶಾನಂದ ಸ್ವಾಮೀಜಿ ಹೇಳಿದರು.
ಅರಬಿಂದೋ ವೇದ ಸಂಸ್ಕೃತಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ವೇದಗಳ ಕುರಿತಾದ ಮೂರು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಾಚೀನ ಸಂಸ್ಕೃತಿಯ ಪಂಡಿತರು ವೇದಗಳನ್ನು ಇಂದ್ರಿಯಗಳಿಗೆ ನಿಲುಕದ ಆದರೂ ಸತ್ಯವಾಗಿರುವ ವಸ್ತುನಿಷ್ಠ ಗ್ರಂಥಗಳು ಎಂದು ಬಣ್ಣಿಸಿದ್ದಾರೆ. ಆದ್ದರಿಂದ ಆಧ್ಯಾತ್ಮಿಕ ಸಾಧನೆಗೆ ಮತ್ತು ಮೋಕ್ಷ ಪ್ರಾಪ್ತಿಗೆ ಅವುಗಳ ಅಧ್ಯಯನ ಮತ್ತು ಜೀವನದಲ್ಲಿ ಸಾರದ ಅಳವಡಿಕೆ ಬಹುಮುಖ್ಯವಾಗಿದೆ ಎಂದು ವ್ಯಾಖ್ಯಾನಿಸಿದರು.
ವೇದಗಳ ಶಬ್ಧಾರ್ಥವನ್ನು ಯಥಾವತ್ತಾಗಿ ಅರ್ಥೈಸುವುದು ಕಷ್ಟಸಾಧ್ಯವಾಗಿದೆ. ಒಂದೊಂದು ಶಬ್ಧ ಮತ್ತು ವಾಕ್ಯಗಳಿಗೆ ಸಂದರ್ಭಕ್ಕೆ ತಕ್ಕನಾಗಿ ವ್ಯಾಖ್ಯಾನಿಸುವ ಪಾಂಡಿತ್ಯದ ಅವಶ್ಯಕತೆಯಿದೆ. ನಂತರ ಬರೆಯಲ್ಪಟ್ಟ ಉಪನಿಷತ್ತುಗಳು ವೇದಗಳ ಸತ್ಯ ಸಾರವನ್ನು ಇನ್ನಷ್ಟು ಸರಳ ರೀತಿಯಲ್ಲಿ ಅರ್ಥೈಸಲು ಮತ್ತು ಪ್ರಚುರಪಡಿಸಲು ಪ್ರಯತ್ನಿಸಿವೆ. ವೇದಗಳು ಮತ್ತು ಉಪನಿಷತ್ತುಗಳು ಪ್ರಕೃತಿಗನುಗುಣವಾಗಿ ರಚಿಸಲ್ಪಟ್ಟ ಗ್ರಂಥಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಮಾಜಿ ವಿಜ್ಞಾನಿ, ವೇದ ಪಂಡಿತರಾದ ಆರ್ ಎನ್ ಸ್ವಾಮಿ ಮಾತನಾಡಿ, ಸ್ವಾಮಿ ಅರಬಿಂದೋ ಅವರು ವೇದಗಳ ಬಗೆಗಿನ ಚಿಂತನೆಯ ಪುನರುತ್ಥಾನಕ್ಕೆ ಮತ್ತು ಜನರಲ್ಲಿ ಅಧ್ಯಾತ್ಮ ಚಿಂತೆಗಳ ಕುರಿತು ಜಾಗೃತಿ ಮೂಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರು ಈ ಜಾಗೃತಿಯ ಕಾರ್ಯದಲ್ಲಿ ಸಾಕಷ್ಟು ಅಡೆತಡೆಗಳನ್ನು ಮತ್ತು ವಿರೋಧಗಳನ್ನು ಸಹ ಎದುರಿಸಬೇಕಾಯಿತು ಎಂದು ಹೇಳಿದರು.