ಬೆಂಗಳೂರು: ಏ.10ರ ರಾಮನವಮಿಯಂದು ಬೆಂಗಳೂರಲ್ಲಿ ರಾಮ ರಥಯಾತ್ರೆ ಹಮ್ಮಿಕೊಂಡಿದ್ದೇವೆ. ಇದೇ ಮೊದಲ ಬಾರಿ ಇಲ್ಲಿ ರಥಯಾತ್ರೆ ಪ್ರಾರಂಭ ಮಾಡಲಾಗುತ್ತಿದೆ. ಜಾತ್ರೆ ವ್ಯಾಪಾರಕ್ಕೆ ಯಾವುದೇ ಸಮುದಾಯಕ್ಕೆ ನಿರ್ಬಂಧವಿರುವುದಿಲ್ಲ. ರಾಮನನ್ನು ಪ್ರೀತಿಸುವ ಯಾರು ಬೇಕಾದರೂ ವ್ಯಾಪಾರ ಮಾಡಬಹುದಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ರಾಮರಥಯಾತ್ರೆಯಲ್ಲಿ 10 ಸಾವಿರ ಜನ ಭಾಗಿ:ಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 10ಕ್ಕೆ ರಾಮ ನವಮಿಯನ್ನು ಇಡೀ ಪ್ರಪಂಚದಲ್ಲಿ ಆಚರಣೆ ಮಾಡುತ್ತಾರೆ. ಅಂದೇ ಬೆಂಗಳೂರು ರಾಮ ರಥಯಾತ್ರೆ ಮಾಡುತ್ತೇವೆ. ಸುಮಾರು 4 ಕಿಲೋಮೀಟರ್ ರಥಯಾತ್ರೆ ಮಾಡುತ್ತೇವೆ. ತಮಿಳುನಾಡಿನ ಇಸ್ಕಾನ್ನವರು ರಥ ಕೊಡುತ್ತಾರೆ.
ಸುಮಾರು 10 ಸಾವಿರ ಜನ ಅಲ್ಲಿ ಭಾಗಿಯಾಗುತ್ತಾರೆ. ರಾಘವೇಂದ್ರ ಸ್ವಾಮಿಗಳು ರಥಯಾತ್ರೆಗೆ ಬರುತ್ತೇನೆ ಎಂದು ಹೇಳಿದ್ದಾರೆ. ಕನಕ ಪೀಠದ ಶ್ರೀ, ಬಸವ ಮಾಧಾರ ಚನ್ನಯ್ಯ ಸ್ವಾಮೀಜಿ ಬರುತ್ತಾರೆ. ಇದು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾಡುತ್ತಿದ್ದೇವೆ. ರಾಮ ರಥಯಾತ್ರೆ ನಿರಂತರವಾಗಿ ನಡೆಯುತ್ತದೆ. ಶನಿವಾರ, ಭಾನುವಾರ ಜಾನಪದ ಕಲೆ ಪ್ರದೇಶನ ನಡೆಯುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ ಎಂದು ಸಚಿವ ಅಶೋಕ್ ಹೇಳಿದರು.