ಬೆಂಗಳೂರು: ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ರೇಸ್ನಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಹ್ಯಾರಿಸ್ಗೆ ಹೆಚ್ಚು ಮತ ಪಡೆದರು ಯುವ ಕಾಂಗ್ರೆಸ್ ಅಧ್ಯಕ್ಷರಾಗುವ ಯೋಗ ಬಂದಿಲ್ಲ.
ಕಳೆದ ತಿಂಗಳು ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಕಣದಲ್ಲಿದ್ದ 7 ಅಭ್ಯರ್ಥಿಗಳ ಪೈಕಿ, ಶಾಂತಿನಗರ ಶಾಸಕ ಎನ್ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆಲುವಿನ ಫೇವರೆಟ್ ಅಭ್ಯರ್ಥಿಯಾಗಿದ್ದರು. ನಿರೀಕ್ಷೆಯಂತೆ ಯುವ ಮತದಾರರು ಇವರ ಕೈ ಹಿಡಿದು ಅತಿಹೆಚ್ಚು ಮತ ನೀಡಿದ್ದರು. ಆದರೆ ಗೆಲ್ಲುವ ಅದೃಷ್ಟ ಅವರಿಗೆ ಲಭಿಸಿಲ್ಲ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಇವರ ಸ್ಪರ್ಧೆಯನ್ನು ತಡೆಹಿಡಿದಿರುವ ಹಿನ್ನೆಲೆ, ಎರಡನೇ ಅತಿ ಹೆಚ್ಚು ಮತ ಪಡೆದ ಯುವ ಕಾಂಗ್ರೆಸ್ ನಾಯಕ ಹಾಗೂ ಎಂಎಸ್ ರಾಮಯ್ಯ ಕುಟುಂಬದ ಕುಡಿ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸೂಚನೆ ಮೇರೆಗೆ ಕರ್ನಾಟಕದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಆನ್ಲೈನ್ ಮೂಲಕ ಚುನಾವಣೆ ನಡೆಸಲಾಗಿತ್ತು. ಒಟ್ಟು 16 ಮಂದಿ ನಾಮಪತ್ರ ಸಲ್ಲಿಸಿ ಕಡೆಯದಾಗಿ ಏಳುಮಂದಿ ಕಣದಲ್ಲಿದ್ದ ಚುನಾವಣೆ ಪ್ರಕ್ರಿಯೆ ಮುಗಿದು ಕೆಲದಿನಗಳ ನಂತರ ಫಲಿತಾಂಶ ಪ್ರಕಟವಾಗಿದೆ. 56271 ಮತಗಳನ್ನು ಪಡೆದ ರಕ್ಷಾ ರಾಮಯ್ಯ ಅಧಿಕೃತವಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಎಂದು ಘೋಷಿತರಾಗಿದ್ದಾರೆ.
ಸಾಕಷ್ಟು ಕುತೂಹಲ ಮೂಡಿಸಿದ್ದ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಎಂಎಸ್ ರಾಮಯ್ಯ ಕುಟುಂಬದ ಮೂರನೇ ತಲೆಮಾರಿನ ನಾಯಕ ಹಾಗೂ ಮಾಜಿ ಸಚಿವ ಎಂ ಆರ್. ಸೀತಾರಾಮ್ ಪುತ್ರ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. 18237 ಮತ ಪಡೆದ ಹೆಚ್ಎಸ್ ಮಂಜುನಾಥ್ ದ್ವಿತೀಯ ಸ್ಥಾನದಲ್ಲಿದ್ದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಂಜುನಾಥ್ 2018ರ ವಿಧಾನಸಭೆ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.
ಮೊಹಮ್ಮದ್ ನಲಪಾಡ್ ಗೆ ಬಿಗ್ ಶಾಕ್
ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ರೇಸ್ನಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದ ಮಹಮ್ಮದ್ ನಲಪಾಡ್ಗೆ ಬಿಗ್ ಶಾಕ್ ಉಂಟಾಗಿದೆ. ನಲಪಾಡ್ 64203 ಮತವನ್ನು ಪಡೆದಿದ್ದರು. ಆದರೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂಬ ಕಾರಣ ನೀಡಿ ಕಡೆಯ ಕ್ಷಣದಲ್ಲಿ ಪಕ್ಷ ಇವರ ಆಯ್ಕೆಯನ್ನು ತಡೆಹಿಡಿದಿದೆ.
ಯುವ ಕಾಂಗ್ರೆಸ್ಗೆ ರಕ್ಷಾ ರಾಮಯ್ಯ ಆಯ್ಕೆ ವಿದ್ವತ್ ಮೇಲೆ ಹಲ್ಲೆ ಮಾಡಿದ್ದ ನಲಪಾಡ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇವರ ಆಯ್ಕೆಯನ್ನು ತಡೆಹಿಡಿಯಲಾಗಿದ್ದು, ಇದಲ್ಲದೆ ಇತ್ತೀಚೆಗೆ ವಿದೇಶಿ ಕಾರು ಚಲಾಯಿಸಿ ಅಪಘಾತ ನಡೆಸಿದ ಪ್ರಕರಣ ಕೂಡ ಅವರ ಹೆಸರಿಗೆ ಕಪ್ಪುಚುಕ್ಕೆಯಾಗಿ ಮಾಡಿದೆ. ಈ ಹಿನ್ನೆಲೆ ಎರಡನೇ ಅತಿಹೆಚ್ಚು ಮತ ಪಡೆದ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರು ಎಂದು ಘೋಷಿತರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ನಾಯಕ ಮಿಥುನ್ 3104 ಮತವನ್ನು ಪಡೆದಿದ್ದು ವಿಶೇಷ. ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಿ ನಂತರ ಫಲಿತಾಂಶ ತಡೆ ಹಿಡಿದಿರುವ ಕಾಂಗ್ರೆಸ್ ಪಕ್ಷದ ನಿಲುವು ಸಾಕಷ್ಟು ಅಚ್ಚರಿ ತಂದಿದ್ದು ಇದಕ್ಕೆ ಕಾಂಗ್ರೆಸ್ ನಾಯಕರು ಯಾವ ರೀತಿ ಸಮಜಾಯಿಶಿ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.